

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 11ರ (BBKS11) ಅದ್ಧೂರಿ ಮನೆಯೊಳಗೆ ಪ್ರವೇಶಿಸಿರುವ 17 ಘಟಾನುಘಟಿ ಸ್ಪರ್ಧಿಗಳ ಮಧ್ಯೆ ಟಾಸ್ಕ್ ಜಟಾಪಟಿಗಿಂತಲೂ ಮಾತಿನ ಸಮರವೇ ಜೋರಾಗಿ ಸದ್ದು ಮಾಡುತ್ತಿದೆ. ನರಕ ಮತ್ತು ಸ್ವರ್ಗ ಎಂಬ ಎರಡು ಗುಂಪಾಗಿ ಒಂದೇ ಸೂರಿನಡಿ ಬದುಕುತ್ತಿರುವ 17 ಸ್ಪರ್ಧಿಗಳ ಮಧ್ಯೆ ಮೊದಲ ದಿನದಿಂದಲೂ ಜಟಾಪಟಿ ಬಿಟ್ಟರೆ ಬೇರೇನೂ ಕೇಳಿಬರುತ್ತಿಲ್ಲ. ಅಲ್ಲಲ್ಲಿ ಒಂದಷ್ಟು ಹಾಸ್ಯ ಮೂಡಿದ್ದೇ ಆದರೂ ಸ್ಪರ್ಧಿಗಳು ಮುಖದಲ್ಲಿ ಮಂದಹಾಸ ಹೆಚ್ಚಿನ ಸಮಯ ಉಳಿಯುತ್ತಿಲ್ಲ. ಇನ್ನು ಇದೆಲ್ಲದರ ನಡುವೆ ಬಿಗ್ಬಾಸ್ ಮನೆಯೊಳಗೆ ದೆವ್ವದ ಸದ್ದು ಭಾರೀ ಸುದ್ದಿ ಮಾಡುತ್ತಿದೆ.
ಮನೆಯೊಳಗೆ ಸ್ಪರ್ಧಿಗಳು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದ ವೇಳೆ ದಿಢೀರ್ ಎಂದು ತಟ್ಟೆಗಳು ಪುಡಿ ಪುಡಿಯಾಗಿವೆ. ಅಡುಗೆ ಮನೆಯಲ್ಲಿ ತಟ್ಟೆ ಒಡೆದ ಶಬ್ದ ಕೇಳುತ್ತಿದ್ದಂತೆ ಓಡೋಡಿ ಹೊರಬಂದ ಕಂಟೆಸ್ಟೆಂಟ್ಗಳು, ಇದು ದೆವ್ವದ ಕಾಟ ಅನಿಸುತ್ತದೆ. ಪದೇ ಪದೇ ಏಕೆ ತಟ್ಟೆ ಒಡೆದು ಹೋಗುತ್ತದೆ? ಇದಕ್ಕೆ ಬೇರೆ ಏನು ಕಾರಣ ಎಂದು ತಮ್ಮಲ್ಲೇ ಪ್ರಶ್ನಿಸಿದ್ದಾರೆ. ಯಾರೂ ಇಲ್ಲದ ಜಾಗದಲ್ಲಿ ಈ ಘಟನೆ ನಡೆಯಲು ಹೇಗೆ ಸಾಧ್ಯ? ಇಲ್ಲಿ ದೆವ್ವ ಇರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರೋಮೋ ನೋಡುಗರಲ್ಲಿ ಕೂಡ ಅಚ್ಚರಿ ಮೂಡಿಸಿದ್ದು, ಏನಿರಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.
ಮನೆಯವರ ಪೈಕಿ ಸ್ವರ್ಗನಿವಾಸಿ ಐಶ್ವರ್ಯ ಶಿಂಧೋಗಿ ತೀವ್ರ ಭಯಭೀತರಾಗಿದ್ದು, ಒಂದು ಬಾರಿ ತಟ್ಟೆ ಒಡೆದರೆ ಏನೋ ಹೇಳಬಹುದು. ಆದ್ರೆ, ಈ ರೀತಿ ಆಗಿದ್ದು ಎರಡನೇ ಬಾರಿಗೆ ಎಂದು ವಿವರಿಸಿದ್ದಾರೆ. ಗೌತಮಿ ಜಾದವ್, ಉಗ್ರಂ ಮಂಜು ಪಾಸಿಟಿವ್ ಆಗಿ ಮಾತನಾಡಿ ಐಶ್ವರ್ಯಗೆ ಧೈರ್ಯ ಹೇಳಿದ್ದಾರೆ. ಅಸಲಿಗೆ ಏನಿದು ಘಟನೆ? ನಡೆದಿದ್ದೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.