

ಬೆಂಗಳೂರು: ನಾಲ್ಕನೇ ವಾರದಲ್ಲಿ ಮನೆಯಿಂದ (BBKS11) ಹಂಸಾ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಬಿಗ್ ಮನೆಯಲ್ಲಿನ ಕಾವು ಮತ್ತಷ್ಟು ಹೆಚ್ಚಾಯಿತೇ ವಿನಃ ಕಡಿಮೆಯಾಗಿದ್ದು ಕಾಣಿಸಲೇ ಇಲ್ಲ. ಸ್ಪರ್ಧಿಗಳ ನಡುವಿನ ಮಾತಿನ ಜಗ್ಗಾಟ, ಬಡಿದಾಟ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಈ ಬಾರಿ ಪರಸ್ಪರ ವಾಕ್ಸಮರದಲ್ಲಿ ನಾನಾ-ನೀನಾ ಎಂದು ಪಣತೊಟ್ಟು, ಅಖಾಡದಲ್ಲಿ ಘರ್ಜಿಸುತ್ತಿರುವ ಸ್ಪರ್ಧಿಗಳಿಗೆ ಇಂದು ಬಿಗ್ ಬಾಸ್ ವಿಶೇಷ ಟಾಸ್ಕ್ವೊಂದನ್ನು ನೀಡಿದ್ದಾರೆ.
ಮನೆಯೊಳಗೆ ನಡೆಯುವ ಯಾವುದೇ ವಿಚಾರಗಳಿಗೂ ಸ್ಪಂದಿಸದೆ, ಅಡಚಣೆಗೊಳ್ಳದೆ, ಕೊಟ್ಟಿರುವ ಚಟುವಟಿಕೆಯಲ್ಲಿ ಸಫಲರಾದರೆ, ತಮ್ಮ ಕುಟುಂಬಸ್ಥರು, ಪ್ರೀತಿ-ಪಾತ್ರರಿಂದ ವಿಶೇಷ ಪತ್ರ ಬರಲಿದೆ ಎಂದು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿದ ಬಿಗ್ ಸ್ಪರ್ಧಿಗಳು, ತಮ್ಮ ಏಕಾಗ್ರತೆಯನ್ನು ಹಾಳು ಮಾಡಲು ನಾನಾ ಕಸರತ್ತು ಮಾಡುವವರ ವಿರುದ್ಧ ಏಕಾಗ್ರತೆ ಕಳೆದುಕೊಳ್ಳದೆ, ಬಝರ್ ಆಗುವವರೆಗೂ ಆಡಬೇಕಿದೆ. ಇದರಲ್ಲಿ ಕೆಲವರು ಸಫರಾದರೆ, ಇನ್ನೂ ಕೆಲವರು ಎಡವಟ್ಟು ಮಾಡಿಕೊಂಡಿದ್ದಾರೆ.
ಮನೆಯ ಸದಸ್ಯರಾದ ಗೌತಮಿ ಜಾಧವ್, ಅನುಷಾ ರೈ ಸೇರಿದಂತೆ ಕೆಲವರಿಗೆ ಪತ್ರ ಸಿಕ್ಕರೆ, ನಿಯಮ ಉಲ್ಲಂಘಿಸಿದ ಧನರಾಜ್ ತಮ್ಮ ಪತ್ನಿಯಿಂದ ಬಂದ ಪತ್ರವನ್ನು ಕಳೆದುಕೊಂಡಿದ್ದಾರೆ. ಇದರಿಂದ ತೀವ್ರ ದುಃಖಕ್ಕೆ ಒಳಗಾದ ಧನರಾಜ್, ಮನೆಯವರೆದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.