

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇದೀಗ 14ನೇ ವಾರಕ್ಕೆ ಕಾಲಿಟ್ಟಿದ್ದು, ಟಾಸ್ಕ್ ಮಧ್ಯೆ ಬರಬೇಕಾದ ಪೈಫೋಟಿ ಸದ್ಯ ಮಾತಿನಲ್ಲೇ ಸ್ಪೋಟಗೊಂಡಿದೆ. ಮೊದಲ ದಿನದಿಂದಲೂ ಮನೆಯೊಳಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರತಾಪ್-ವಿನಯ್ ನಡುವಿನ ಮನಸ್ತಾಪಗಳು ಇಂದು ಏಕಾಏಕಿ ಭುಗಿಲೆದ್ದಿದೆ.
14ನೇ ವಾರಕ್ಕೆ ಹೆಜ್ಜೆಯಿಟ್ಟ ಖುಷಿಯಲ್ಲಿದ್ದ ಮನೆಮಂದಿ ಹಾಲ್ನಲ್ಲಿ ಕುಳಿತು ಬಿಗ್ ಬಾಸ್ ಕೊಟ್ಟ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತಿಗೆ ನಿಂತ ವಿನಯ್, 'ಅಮಾಯಕನ ತರ ಎಲ್ಲರಿಗೂ ಬೂದಿ ಎರಚಿಕೊಂಡು ಈ ಮನೆಯೊಳಗೆ ಇರುವುದು ಅಂದರೆ ಅದು ಪ್ರತಾಪ್' ಎಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರತಾಪ್, 'ನೀವಂದಂಗೆಲ್ಲಾ ಹೇಳಿಸಿಕೊಳ್ಳುವುದಕ್ಕೆ ಆಗವುದಿಲ್ಲ' ಎಂದು ತಿರುಗೇಟು ನೀಡಿದರು.
ಈ ಮಾತು ಹೊರಬರುತ್ತಿದ್ದಂತೆ ಏರು ಧ್ವನಿಯಲ್ಲಿ ಮಾತಾಡಿದ ವಿನಯ್, ಏನೋ ಮಾಡ್ತೀಯಾ ಅಂತ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್, 'ಇದರ ಪರಿಣಾಮ ನೆಟ್ಟಗಿರಲ್ಲ, ಮಾತಿನ ಮೂಲಕ ಉತ್ತರ ಕೊಡ್ತೀನಿ' ಎಂದು ಹೇಳಿದ್ದಾರೆ. ಇಬ್ಬರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಇದು ಯಾವ ಹಂತ ತಲುಪಿತು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.