

ಬೆಂಗಳೂರು: ಇಂದು ಬಿಗ್ ಮನೆಯೂ ಕುಸ್ತಿ ಅಖಾಡದಲ್ಲಿ ಜಟ್ಟಿಗಳ ಜಟಾಪಟಿ ಆರಂಭವಾಗಿದ್ದು, ನಿನ್ನೆ ಮೊನ್ನೆಯೆಲ್ಲ ಹಳ್ಳಿಮನೆಯಾಗಿ ಬದಲಾಗಿದ್ದ ಬಿಗ್‌ಬಾಸ್ ಮನೆಯಲ್ಲೀಗ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾರಾಜಿಸುತ್ತಿದೆ. ಕುಸ್ತಿ ಅಖಾಡದ ಒಳಗೆ ದೈಹಿಕ ಶಕ್ತಿ ಪ್ರದರ್ಶನ ನಡೆಯುತ್ತಿದ್ದರೆ, ಅಖಾಡದ ಹೊರಗೆ ಮಾತಿನ ಶಕ್ತಿಪ್ರದರ್ಶನವೂ ಜೋರಾಗಿಯೇ ಪ್ರಾರಂಭಗೊಂಡಿದೆ.
ಕಳೆದ ಎರಡು ದಿನಗಳಿಂದ ಹಳ್ಳಿ ವಾತಾವರಣದಲ್ಲಿ, ಬಿಗ್‌ಬಾಸ್ ಸ್ಪರ್ಧಿಗಳು ಎರಡು ಕುಟುಂಬಗಳಾಗಿ ಬದುಕುತ್ತಿದ್ದಾರೆ. ಅವರ ನಡುವೆ ಇದೀಗ ಬಿರುಸಿನ ಸ್ಪರ್ಧೆಯೂ ನಡೆಯುತ್ತಿದ್ದು, ಮಾತುಗಳ ಜಟಾಪಟಿ ಕೈ ಕೈ ಮಿಲಾಯಿಸುವ ಹಂತವನ್ನೂ ಮೀರಿದೆ. ಈಗ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕೈ ಕೈ ಮಿಲಾಯಿಸುವ ನೇರ ಅವಕಾಶವನ್ನು ನೀಡಿದ್ದಾರೆ.
‘ಆನೆ’ಯಾಗಿ ಬಿಂಬಿಸಿಕೊಂಡಿದ್ದ ವಿನಯ್ ಮತ್ತು ಮೈಕಲ್ ಅಖಾಡದಲ್ಲಿ ಮುಖಾಮುಖಿಯಾಗಿದರೆ, ಸ್ನೇಹಿತ್ ಮತ್ತು ಕಾರ್ತಿಕ್ ಜಿದ್ದಾಜಿದ್ದಿಗೆ ಮುಂದಾಗಿದ್ದಾರೆ. ಅತ್ತ, ನೀತು ಮತ್ತು ಸಂಗೀತಾ ಕೂಡ ಪಂದ್ಯಕ್ಕೆ ಇಳಿದಿದ್ದಾರೆ. ವಿನಯ್ ಮತ್ತು ಮೈಕಲ್ ಇಬ್ಬರೂ ಒಮ್ಮೆಲೇ ಅಖಾಡದಿಂದ ಹೊರಬಿದ್ದ ದೃಶ್ಯ, ಸ್ನೇಹಿತ್ ಮತ್ತು ಕಾರ್ತಿಕ್ ಪರಸ್ಪರ ಕೈ ಮಿಲಾಯಿಸಿದ್ದಾರೆ.
ಅಖಾಡದಲ್ಲಿ ಕುಸ್ತಿ ಪ್ರಾರಂಭಗೊಂಡರೆ ಇತ್ತ ಹೊರಗಡೆ ತನಿಷಾ ಮತ್ತು ವಿನಯ್ ನಡುವೆ ಮಾತಿನ ಚಕಮಕಿಯೂ ಜೋರಾಗಿಯೇ ನಡೆದಿದೆ. ವಿನಯ್, ತನಿಷಾಗೆ ‘ಡ್ರೆಸ್ ಚೇಂಜ್ ಮಾಡ್ಕೊಂಡು ಬಂದ್ಬಿಡಿ ನೀವು’ ಎಂದು ಸವಾಲು ಹಾಕಿದರು. ಇದಕ್ಕೆ ರೊಚ್ಚಿಗೆದ್ದ ತನಿಷಾ, ‘ಯಾರು ಆಡ್ತಿದ್ದಾರೆ ಅವ್ರು ಮಾತಾಡ್ಲಿ. ಮಿಕ್ಕವ್ರೆಲ್ಲ ಮಾತಾಡಿದ್ರೆ ಸರಿ ಇರಲ್ಲ’ ಎಂದು ಅವಾಜ್ ಹಾಕಿದ್ದಾರೆ.
ವಿನಯ್, ‘ಏನೇ’ ಎಂದು ಏಕವಚನಕ್ಕಿಳಿದಿದ್ದೇ ತಡ, ತನಿಷಾ ಕೂಡ, ‘ನಿಂಗೆ ಯಾವನೂ ಅಧಿಕಾರ ಕೊಟ್ಟಿಲ್ಲ. ಮೈಂಡ್ ಯುವರ್ ವರ್ಡ್ಸ್’ ಎಂದು ಕೈ ತೋರಿಸಿ ಉತ್ತರಿಸಿದ್ದಾರೆ. ಇಬ್ಬರ ಏರುಧ್ವನಿ ಜಗಳದಲ್ಲಿ ಬೇಸತ್ತ ಸ್ಪರ್ಧಿಗಳು, ಮೌನದಿಂದಲೇ ಉಳಿದ ಪಂದ್ಯಗಳತ್ತ ಗಮನಹರಿಸಿದ್ದಾರೆ. ಅಖಾಡದ ಒಳಗಿನ-ಹೊರಗಿನ ಜಟಾಪಟಿಯಲ್ಲಿ ಗೆಲ್ಲುವವರು ಯಾರು, ಸೋತು ಮಣ್ಣು ಮುಕ್ಕುವವರು ಯಾರು? ಕಾದು ನೋಡಬೇಕಿದೆ.
ದಿನದ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ನೋಡಬಹುದು.