ಮಿಸ್ ಕಾಲ್​ನಿಂದ ಹುಟ್ಟಿದ ಪ್ರೇಮಕಥೆ!

Untitled design - 2023-11-02T153344.979
Published on

ಬೆಂಗಳೂರು: ಕಳೆದ 7-8 ವರ್ಷಗಳಿಂದ ಚಿತ್ರರಂಗದಲ್ಲಿ ಸಹ, ಸಹಾಯಕ ನಿರ್ದೇಶಕನಾಗಿ ಹಲವು ಸಿನಿಮಾಗಳಲ್ಲಿ ದುಡಿದಿದ್ದ ಸತೀಶ್ ಕುಮಾರ್ ಇದೀಗ 'ಜೊತೆಯಾಗಿರು'‌ ಚಿತ್ರದ ಮೂಲಕ ಈಗ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು, ಅದರ ನಿರ್ದೇಶನವನ್ನೂ ಕೂಡ ತಾವೇ ಮಾಡಿದ್ದಾರೆ.

2009 ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರಕ್ಕೆ ಚಿತ್ರಕಥೆ ಹೆಣೆದಿದ್ದಾರೆ. ಆಗಿನ್ನೂ ಕೀಪ್ಯಾಡ್ ಮೊಬೈಲ್ ಇದ್ದಂಥ ಸಮಯ. ಆಗ ಹುಡುಗಿಯ ಮೊಬೈಲ್​ಗೆ ಬರುವ ಒಂದು ಮಿಸ್ ಕಾಲ್ ನಿಂದ ಆರಂಭವಾಗುವ ಪ್ರೇಮಕಥೆ ಮುಂದೆ ಏನೆಲ್ಲ‌ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರವನ್ನು ಅದೇ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಿಸಲಾಗಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಕೂಡ ಲಭಿಸಿದ್ದು,

ರೇಣು ಮೂವೀಸ್ ನಿರ್ಮಾಣದ ಈ ಚಿತ್ರದ ಐದು ಹಾಡುಗಳಿಗೆ ವಿನು ಮನಸು ಸಂಗೀತ‌ ಸಂಯೋಜಿಸಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ, ರಾಜ ಶಿವಶಂಕರ್ ಮತ್ತು ಆನಂದ್ ಇಳಯರಾಜ ಛಾಯಾಗ್ರಹಣ, ಕೆ.ಕಲ್ಯಾಣ್ ಮತ್ತು ಮನ್ವರ್ಷಿ ಅವರ ಸಾಹಿತ್ಯ ಚಿತ್ರಕ್ಕಿದೆ.

ಚಿತ್ರದ ಹಾಡುಗಳನ್ನು ಚಿಕ್ಕಮಗಳೂರಿನ ಕಳಸ, ಸಕಲೇಶಪುರ, ಕುಂದಾಪುರದ ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಚಿತ್ರಿಕರಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾದಲ್ಲಿ ವೆಂಕಟೇಶ್ ಹೆಗ್ಡೆ ಮತ್ತು ಸುನೀಲ್ ಕಾಂಚನ್ ನಾಯಕರಾಗಿ ಅಭಿನಯಿಸಿದ್ದು, ರಶ್ಮಿ ಗೌಡ ಮತ್ತು ಪೂಜಾ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಶಂಕರ ನಾರಾಯಣ್, ಸುಧೀರ್, ಸುಧಾ, ಯಶೋಧ, ಅಶ್ವಿನಿ, ಸಂತೋಷ್, ರಾಜಶೇಖರ್, ಮಂಜು ಮುಂತಾದವರ ತಾರಾಗಣವಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ನವೆಂಬರ್​ನಲ್ಲಿ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net