

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ವಾರದ ಮೊದಲ ದಿನವೇ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಜಟಾಪಟಿ ಬುಗಿಲೆದ್ದಿದೆ. ಟಾಸ್ಕ್ಗಳ ಮಧ್ಯೆ ನಡೆಯಬೇಕಿದ್ದ ಮಾತುಗಳ ಸಮರ ಇದೀಗ ಕೆಲವು ಸಣ್ಣ ವಿಚಾರಕ್ಕೆ ಸ್ಪೋಟಗೊಂಡಿದೆ.
ಬಿಗ್ ಮನೆಯ ಬಿಗ್ ಸ್ಪರ್ಧಿಗಳ ನಡುವೆ ಭಾರೀ ಪೈಪೋಟಿ ಎದುರಾಗಿದ್ದು, ಟಾಸ್ಕ್ಗಳು ಕೂಡ ಕಠಿಣವಾಗುತ್ತಿದೆ. ವಾರದ ಮೊದಲ ದಿನ ಸೋಮವಾರದಂದು ಮನೆಯ ಕ್ಯಾಪ್ಟನ್ ಆದ ನೀತು ಮತ್ತು ಕಾರ್ತಿಕ್ ನಡುವೆ ಮನಸ್ತಾಪದ ಕಿಚ್ಚು ಹೊತ್ತಿಕೊಂಡಿದೆ. ಅಡುಗೆ ಮನೆಯಲ್ಲಿ ನಾನು ಮಾತನಾಡಬಾರದು ಎಂದು ಹೇಳೋದಕ್ಕೆ ನೀವ್ಯಾರು ಎಂದ ಕಾರ್ತಿಕ್ಗೆ, ಹೇಳಿದ ಮೇಲೆ ಹೆಚ್ಚು ಮಾತನಾಡಬೇಡಿ ಎಂದು ನೀತು ಹೇಳಿದರು.
ಈ ಮಾತು ಕೇಳುತ್ತಿದ್ದಂತೆ ತಾಳ್ಮೆಯನ್ನು ಕಳೆದುಕೊಂಡ ಕಾರ್ತಿಕ್ ಜೋರಾಗಿ ಕಿರುಚಾಡುತ್ತ, ನೀವು ಕ್ಯಾಪ್ಟನ್ ಎಂಬ ಕಾರಣಕ್ಕೆ ನಿಮ್ಮ ಬಳಿ ಹೇಳಿದೆ. ನಿಮಗೆ ಸಮಸ್ಯೆ ಬಗೆಹರಿಸಲು ಆಗಲಿಲ್ಲ ಎಂದರೆ ಸುಮ್ಮನಿದ್ದುಬಿಡಿ ಎಂದು ಏರು ಧ್ನನಿಯಲ್ಲಿ ಹೇಳಿದರು.
ಈ ಮಧ್ಯೆ ನೀತು ಅವರಿಂದ ಬಂದ ಹಿತ್ತಾಳೆ ಕಿವಿ ಪದಕ್ಕೆ ತೀವ್ರ ಕುಪಿತಗೊಂಡ ಕಾರ್ತಿಕ್ ಮನೆ ಮಂದಿಗೆಲ್ಲಾ ಕೇಳುವಂತೆ ಚೀರಾಡಿದ್ದಾರೆ. ಇಬ್ಬರ ನಡುವಿನ ಜಗಳಕ್ಕೆ ಅಸಲಿ ಕಾರಣವೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.