

ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 11 ಈಗ 100 ದಿನಗಳತ್ತ ಸಮೀಪಿಸುತ್ತಿದ್ದು, ಶತಕ ದಿನಗಳ ಪೂರೈಸಲು ಇನ್ನೇನು ಕೆಲವು ದಿನಗಳಷ್ಟೇ ಬಾಕಿಯಿದೆ. ಹೀಗಿರುವಾಗಲೇ ಕಳೆದ ವಾರದ ನಾಮಿನೇಷನ್ ಬಿಸಿಯಲ್ಲಿದ್ದ ಸ್ಪರ್ಧಿಗಳ ಪೈಕಿ ಶಿಶಿರ್ ಮನೆಯಿಂದ ಹೊರಬಂದರು. ಆದರೆ, ಶಿಶಿರ್ ಎಲಿಮಿನೇಷನ್ ಬೆನ್ನಲ್ಲೇ ಗೋಲ್ಡ್ ಸುರೇಶ್ ಹೊರಬಂದಿದ್ದು, ಇಡೀ ಮನೆ ಸೇರಿದಂತೆ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿತು. ಸದ್ಯ ಇದರ ಬೆನ್ನಲ್ಲೇ ಪೈಪೋಟಿಗೆ ಇಳಿದಿರುವ ಮನೆಯ ಸ್ಪರ್ಧಿಗಳ ಮಧ್ಯೆ 'ತಾಯಿತ ಕಟ್ಟಿಸಿಕೊಳ್ಳುವ' ವಿಚಾರ ಇದೀಗ ತೀವ್ರ ಗದ್ದಲ ಉಂಟುಮಾಡಿದೆ.
ಇದನ್ನೂ ಓದಿ: ಕಾಡುಪ್ರಾಣಿ ದಾಳಿಯಿಂದ ವರ್ಷಕ್ಕೆ 30 ರಿಂದ 40 ಸಾವು
ಕಳೆದ ವಾರ ಸುದೀಪ್ ಅವರ ಸಂಚಿಕೆಯಲ್ಲಿ ವೀಕ್ಷಕರ ಮತ ಗಳಿಸಿ, ಸೇಫ್ ಆದ ರಜತ್, ಮನೆ ಮಂದಿಗೆಲ್ಲಾ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ಇಡೀ ಮನೆಗೆ ಟಕ್ಕರ್ ಕೊಟ್ಟ ರಜತ್, ನನ್ನನ್ನು ಕೆಣಕುವ ಪ್ರಯತ್ನ ಮಾಡಿದರೆ, ನನ್ನ ಅಸಲಿ ಆಟ ತೋರಿಸ್ತೀನಿ. ಆಗ ಎಲ್ಲರೂ ತಾಯಿತ ಕಟ್ಟಿಸಿಕೊಳ್ಳಬೇಕಷ್ಟೇ ಎಂದು ತಮ್ಮ ಖಡಕ್ ಮಾತುಗಳನ್ನು ಸುದೀಪ್ ಎದುರಿಗೆ ಹೇಳಿದ್ದರು. ರಜತ್ನ ಕೆರಳಿಸುವ ಮಾತುಗಳು ಮನೆಯವರಲ್ಲಿ ಕಿಚ್ಚು ಹಚ್ಚಿಸಿದ್ದೇ ಆದರೂ ಯಾರೊಬ್ಬರು ಆ ಕ್ಷಣಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಅದೇ ಸಿಡಿಮಿಡಿ ಈಗ ಟಾಸ್ಕ್ನಲ್ಲಿ ಹೊರಬರುತ್ತಿದೆ.
ಇಂದು ಕೊಟ್ಟ ಟಾಸ್ಕ್ನಲ್ಲಿ ಚೈತ್ರಾ ಉಸ್ತುವಾರಿಯನ್ನು ಖಂಡಿಸಿರುವ ರಜತ್, ಚೈತ್ರಾ ಮಾತಿಗೆ ಸಿಟ್ಟಾಗಿ ಬಿಗ್ ಬಾಸ್ ಕೊಟ್ಟ ಚುಟುವಟಿಕೆಯ ವಸ್ತುಗಳನ್ನು ಉರುಳಿಸಿದ್ದಾರೆ. ಈ ವೇಳೆ ಚೈತ್ರಾ, ರಜತ್ ಅವರ ತಾಯಿತ ಕಟ್ಟಿಸಿಕೊಳ್ಳುವ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಮನೆಯವರ ಮಧ್ಯೆ ದೊಡ್ಡ ಜಟಾಪಟಿ ಭುಗಿಲೆದ್ದಿದ್ದೇ ತಡ ಮಂಜು ಮತ್ತು ರಜತ್ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿದ್ದು, ಕೈ-ಕೈ ಮಿಲಾಯಿಸುವ ಹಂತ ತಲುಪಿದೆ. ಅಸಲಿಗೆ ಏನಾಯಿತು, ಜಗಳಕ್ಕೆ ಕಾರಣವೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಿ ತಿಳಿಯಬೇಕಿದೆ.