

ಎನ್.ಆರ್.ಪುರ: ರಾಜ್ಯದಲ್ಲಿ ಪ್ರತಿ ವರ್ಷ ಪ್ರಾಣಿ ದಾಳಿಯಿಂದ 30 ರಿಂದ 40 ಜನರು ಮೃತರಾಗುತ್ತಿರುವುದು ವಿಷಾದನೀಯ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಸೀತೂರಿನಲ್ಲಿ ಆನೆ ತುಳಿತದಿಂದ ಮೃತಪಟ್ಟ ಉಮೇಶ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮನುಷ್ಯನ ಜೀವನೂ ಉಳಿಯಬೇಕು, ಪ್ರಾಣಿ ಸಂಕುಲವೂ ಉಳಿಯಬೇಕು. ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರೀಕರಣದಿಂದ ಅರಣ್ಯದ ವಿಸ್ತೀರ್ಣ ಕಡಿಮೆಯಾಗುತ್ತಿದೆ ಎಂದರು.
ಮೃತ ಉಮೇಶ್ ಅವರ ಕುಟುಂಬಕ್ಕೆ ಸರ್ಕಾರದಿಂದ 15 ಲಕ್ಷ ರೂ. ಇಲಾಖೆಯಿಂದ 5 ಲಕ್ಷ, ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ವೈಯಕ್ತಿವಾಗಿ 2 ಲಕ್ಷ ರೂ, ಹಾಗೂ ನನ್ನ ಕಡೆಯಿಂದ ವೈಯಕ್ತಿಕವಾಗಿ 1ಲಕ್ಷ ರೂ.ಗಳನ್ನು ಶಾಸಕ ಟಿ.ಡಿ.ರಾಜೇಗೌಡರ ಮೂಲಕ ತಲುಪಿಸಲಾಗುವುದು. ಇಲಾಖೆಯಲ್ಲಿ ಕಾಯಂ ಆಗಿ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲದಿರುವುದರಿಂದ ಕುಟುಂಬದ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಲು ಸೂಚಿಸಲಾಗಿದೆ. ಪರಿಹಾರದ ಧನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ.
ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಇಲಾಖೆ ಕ್ರಮ ಕೈಗೊಳ್ಳಲಿದೆ. ಆನೆ ಯಾವ ಸಮಯದಲ್ಲಿ, ಹೇಗೆ ಬರುತ್ತವೆ ಎಂದು ಗೊತ್ತಾಗುವುದಿಲ್ಲ. ಅರಣ್ಯ ಪ್ರದೇಶ ಜಾಸ್ತಿ ಇರುವುದರಿಂದ ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ಮಾಡಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳುವ ಅಗತ್ಯವಿದೆ ಎಂದರು.