

ಕಡೂರು: ಜಾತಿಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ 12ನೇ ಶತಮಾನದಲ್ಲಿ ಧ್ವನಿಎತ್ತಿ ಸಮಾಜ ಸುಧಾರಣೆಗೆ ಮುನ್ನುಡಿ ಬರೆದವರು ಬಸವಣ್ಣ ಎಂದು ಗದಗದ ಭೈಲೂರಿನ ನಿಶ್ಕಲಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಹಿರೇನಲ್ಲೂರು ಗ್ರಾಮದಲ್ಲಿ ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗ ಕೇಂದ್ರ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಬಸವೇಶ್ವರ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣರ ಕ್ರಾಂತಿಕಾರಕ ಹೆಜ್ಜೆಗಳು ಇಂದಿಗೂ ಪ್ರಸ್ತುತ. ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮಾಜ ಸುಧಾರಣೆಗೆ ಪಣ ತೊಟ್ಟವರು. ಅವರ ವಚನಗಳನ್ನು ಅಧ್ಯಯನ ಮಾಡಿದರೆ ನಮ್ಮಲ್ಲಿ ಬದಲಾವಣೆ ಸಾಧ್ಯ ಎಂದರು.
ಮನುಷ್ಯನ ಉದ್ಧಾರಕ್ಕಾಗಿ ಬಸವಣ್ಣ ಕ್ರಾಂತಿಕಾರಕ ಹೆಜ್ಜೆಗಳೊಂದಿಗೆ ಜಾತಿ ಪದ್ಧತಿ ತೊಲಗಿಸಿದರು. ಆದರೆ ಪ್ರಸ್ತುತ ಸಮಾಜದಲ್ಲಿ ರಾಜಕಾರಣಿಗಳು ಜಾತಿ ಪದ್ದತಿಯೇ ಮುಖ್ಯ ಎಂಬಂತೆ ವರ್ತಿಸುತ್ತಿರುವುದು ವಿಪರ್ಯಾಸ ಎಂದರು.
ನುಡಿದಂತೆ ನಡೆದು ಯಾವ ಪದವಿಗೂ ಆಸೆ ಪಡದೆ ಜನರಲ್ಲಿ ಭಕ್ತಿಯ ಬೀಜಬಿತ್ತಿದರು. ನವ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ನೀಡಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ. ಸಮಾಜ ಸುಧಾರಣೆಗಾಗಿ ಎಲ್ಲ ಜಾತಿ, ಧರ್ಮಗಳನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ದರು ಎಂದು ಬಣ್ಣಿಸಿದರು.
ಅಂದು ಧರ್ಮ ಮತ್ತು ಅಧಿಕಾರದ ನಡುವೆ ನಲುಗಿದ್ದ ಕೆಳವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿದ ಮಹಾನ್ ಚೇತನ ಬಸವಣ್ಣ. ನಾವು ಬಸವಣ್ಣನ ಒಂದೆರಡು ವಚನ ಕಲಿತರೆ ಬಸವಣ್ಣ ಅವರನ್ನು ಅರಿತಂತಾಗುವುದಿಲ್ಲ. ಆ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ಬಸವಣ್ಣರಿಗೆ ನೀಡುವ ನಿಜ ಗೌರವ ಎಂದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಮುಖಂಡರನ್ನು ಗೌರವಿಸಲಾಯಿತು. ತಾವರೆಕೆರೆ ಶಿಲಾ ಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ವೈಎಸ್‌ವಿ ದತ್ತ, ಜಿಪಂ ಮಾಜಿ ಅಧ್ಯಕ್ಷೆ ಕವಿತಾ ಬೆಳ್ಳಿಪ್ರಕಾಶ್ ಮಾತನಾಡಿದರು.
ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗದ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ನಿವೃತ್ತ ಲೆಫ್ಟಿನೆಂಟ್ ಜನರಲ್ ಉಪ ಮುಖ್ಯಸ್ಥ ಬಿ.ಎಸ್.ರಾಜು, ಎಚ್.ಎಸ್. ಈಶ್ವರಪ್ಪ, ಜಿ.ಬಿ.ಹೇಮಂತ್‌ಕುಮಾರ್, ಅರುಣ್‌ಕುಮಾರ್, ಜಿ.ಮುರುಗೇಶ್, ಎಚ್.ಸಿ.ರಾಜಪ್ಪ, ಎಚ್.ಎಸ್.ಕುಮಾರಪ್ಪ ಇತರರಿದ್ದರು.