ಬಡವರ ಪರವಾಗಿ ನನ್ನ ಹೃದಯ ಮಿಡಿಯುತ್ತದೆ: ಬಸವರಾಜ ಬೊಮ್ಮಾಯಿ

Basavaraja Bommai
ಸಾಂದರ್ಭಿಕ ಚಿತ್ರ
Published on

ಮೈಸೂರು: ನನಗೆ ಬಡವರ ಕಷ್ಟ ಗೊತ್ತಿದೆ. ಹೀಗಾಗಿ ಬಡವರ ಕಲ್ಯಾಣಕ್ಕಾಗಿ ನಾನು ದುಡಿಯುತ್ತಿದ್ದೇನೆ. ಬಡವರ ಪರವಾಗಿ ನನ್ನ ಹೃದಯ ಸದಾ ಮಿಡಿಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರದಲ್ಲಿ ವಿಪಕ್ಷಗಳು ಬದ್ಧತೆ ತೋರಲಿಲ್ಲ. ಪರಿಶಿಷ್ಟ ಪಂಗಡವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಈ ಪಂಗಡವನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಪಕ್ಷಗಳು ನೆನಪಿಸಿ ಕೊಳ್ಳುತ್ತಾರೆ. ಭಾಷಣದಿಂದ ದೀನ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿದರೆ, ವಿಪಕ್ಷದವರು ಕೊಂಕು ಮಾತನಾಡುತ್ತಾರೆ. ಎಲ್ಲಿ ನೋವಿದೆಯೋ ಅಲ್ಲಿಗೆ ಸರ್ಕಾರ ಧಾವಿಸುತ್ತದೆ. ಸರ್ಕಾರ ಸದಾ ನಿಮ್ಮ ಪರವಿದೆ. ನೀವು ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದರೆ ಎಲ್ಲಾ ಕಾರ್ಯಕ್ರಮ ಮುಂದುವರಿಯುತ್ತವೆ. ಕೆಲವರು ಚುನಾವಣೆಗಾಗಿ ಆಶ್ವಾಸನೆ ಕೊಡುತ್ತಿದ್ದಾರೆ. ಉಚಿತ ಅಕ್ಕಿ, ಉಚಿತ ವಿದ್ಯುತ್ ಹೀಗಾಗಲೇ ಹಲವು ಯೋಜನೆಗಳ ಮೂಲಕ ತಲುಪುತ್ತಿದೆ. ಮಾತಿನಲ್ಲಿ ಗ್ಯಾರಂಟಿ ಇಲ್ಲ. ಹೀಗಾಗಿ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಜನರನ್ನು ಯಾಮಾರಿಸುವ ಕೆಲಸವನ್ನು ಮಾಡುತ್ತಿದ್ದಾರೆಂದು ಕಾಂಗ್ರೆಸ್​​ ಪಕ್ಷದ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.

ನಮ್ಮಲ್ಲಿ ನೈತಿಕತೆ ಇದೆ. ಬಡವರ ಪರ ಕೆಲಸ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಬಡವರ ಬದುಕಿಗೆ ಹೊಸ ಮನ್ವಂತರ ತಂದಿದ್ದೇವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net