

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಬಿಜೆಪಿ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸ್ವತಃ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಶೆಟ್ಟರ್ ನಡೆಯನ್ನು ವಿರೋಧಿಸಿದ್ದರು. ಸಿಎಂ ಬೊಮ್ಮಾಯಿ ನಿನ್ನೆ ಮಾತನಾಡುತ್ತಾ, ಜಗದೀಶ್ ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ಕಸಿವಿಸಿ ಉಂಟು ಮಾಡಿದೆ ಎಂದು ಹೇಳಿದ್ದರು.
ಇದೀಗ ಜಗದೀಶ್ ಶೆಟ್ಟರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ನಾನು ಹುಬ್ಬಳ್ಳಿ-ಧಾರವಾಡ, ಹಾವೇರಿಯಲ್ಲಿ ಬಿಜೆಪಿ ಕಡೆ ಹೆಚ್ಚಿನ ಒಲವು ಇದೆ. ಕಾಂಗ್ರೆಸ್ನವರು ಬಿಜೆಪಿ ನಾಯಕರನ್ನು ಸೇರ್ಪಡೆ ಮಾಡಿಕೊಂಡಿರಬಹುದು. ಆದರೆ ಅವರ ಮತ ಬ್ಯಾಂಕ್ ಸಂಪೂರ್ಣ ಕುಸಿದಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ಕಾಂಗ್ರೆಸ್ ಹಿರಿಯ ನಾಯಕರನ್ನು ಬಳಸಿಕೊಂಡು ಹೊರಗಡೆ ಹಾಕಿದೆ. ವಿರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸ್ ಮುಂತಾದವರನ್ನು ಹೊರಹಾಕಿದರು. ಅಂತಹ ಪಕ್ಷಕ್ಕೆ ಈಗ ಜಗದೀಶ್ ಶೆಟ್ಟರ್ ಹೋಗಿದ್ದಾರೆ. ಹಿರಿಯರಿಗೆ ಆದ ಪರಿಸ್ಥಿತಿಯೇ ಶೆಟ್ಟರ್ ಅವರಿಗೂ ಆಗಲಿದೆ ಎಂದು ಹೇಳಿದರು.
ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಸ್ಥಾನ ಕೊಟ್ಟಿತ್ತು. ಅವರ ಬೆಳವಣಿಗೆಯಲ್ಲಿ ಬಿಜೆಪಿಯೇ ಪ್ರಮುಖ ಪಾತ್ರ ವಹಿಸಿದೆ. ಅವರನ್ನು ಕಡೆಗಣಿಸುವ, ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ನಮ್ಮ ವರಿಷ್ಠರಿಗೂ ಇದೆಲ್ಲ ಮಾಹಿತಿ ಇದೆ. ಬಿಜೆಪಿ ಕಾರ್ಯಕರ್ತರಿಂದ ಬೆಳದಿರುವ ಪಕ್ಷವಾಗಿದ್ದು, ಇದನ್ನು ನಿಭಾಯಿಸುವ ಶಕ್ತಿ ನಮಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ನವರಿಗೆ ಈಗ ಲಿಂಗಾಯತರ ಮೇಲೇ ಯಾಕಿಷ್ಟು ಪ್ರೀತಿ ಬಂದಿದೆ ಗೊತ್ತಿಲ್ಲ. ಕಳೆದ 50 ವರ್ಷ ಲಿಂಗಾಯತ ನಾಯಕರನ್ನು ತುಳಿದಿರುವುದು ಕಾಂಗ್ರೆಸ್. ಲಿಂಗಾಯತ ನಾಯಕರನ್ನು ಬೆಂಗಳೂರಿಗೂ ಕರೆದುಕೊಂಡು ಬರೆದೆ, 50 ವರ್ಷ ಲಿಂಗಾಯತರನ್ನು ದೂರ ಇಟ್ಟರು. ಇವರಿಂದ ಪಾಠ ಕಲಿಯಬೇಕಾ? ಲಿಂಗಾಯತ ಸಮುದಾಯ ಜಾಗೃತ ಸಮುದಾಯ. ಯಾರು ಅವರನ್ನು ಬೆಂಬಲಿಸಿದ್ದಾರೆ, ಅವರ ಹಿತರಕ್ಷಣೆ ಮಾಡಿದ್ದಾರೆ ಎಂದು ಗೊತ್ತಿದೆ. ಯಡಿಯೂರಪ್ಪನವರಂತಹ ಮೇರು ನಾಯಕತ್ವ, ಬಹಳ ದೊಡ್ಡ ನಾಯಕತ್ವ ಇರುವಾಗ ಲಿಂಗಾಯತ ನಾಯಕರು ನಮ್ಮೊಂದಿಗೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.