ಹರಕೆರೆ-ಸವಾಯಿಪಾಳ್ಯದವರೆಗೆ ತಡೆಗೋಡೆ

tunga baagina
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭಾನುವಾರ ತುಂಗಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು. ಬಲ್ಕಿಷ್ ಬಾನು, ಆರ್.ಪ್ರಸನ್ನಕುಮಾರ್, ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಎನ್.ರಮೇಶ್, ವಿಜಯಕುಮಾರ್, ಎಸ್.ಕೆ.ಶರತ್ ಮತ್ತಿತರರಿದ್ದರು.
Published on

ಶಿವಮೊಗ್ಗ: ನಗರದಲ್ಲಿ ತುಂಗಾ ನದಿ ಪ್ರವಾಹದಿಂದ ಆಗುವ ಹಾನಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಹಾಗಾಗಿ ಹರಕೆರೆಯಿಂದ ಸವಾಯಿಪಾಳ್ಯದವರೆಗೆ 500 ಮೀಟರ್ ತಡೆಗೋಡೆ ನಿರ್ಮಿಸಬೇಕಿದೆ. ಹಾಗಾಗಿ ವಾರದೊಳಗೆ ಕ್ರಿಯಾಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಬೈಪಾಸ್ ಸೇತುವೆ ಎದುರು ಸ್ಮಾರ್ಟ್ ಸಿಟಿಯಿಂದ ನಿರ್ಮಿಸಿದಂತೆ ಹಿಂಭಾಗದಲ್ಲೂ ತಡೆಗೋಡೆ ನಿರ್ಮಿಸಬೇಕಿತ್ತು. ತುಂಗಾ ಜಲಾಶಯದಿಂದ ಅಧಿಕ ನೀರು ಬಿಟ್ಟಾಗ ಶಿವಮೊಗ್ಗದಲ್ಲಿ ಪ್ರವಾಹ ಭೀತಿ ಎದುರಾಗುತ್ತದೆ. ತುಂಗಾ ರಾಜ್ಯದ ಪ್ರಮುಖ ನದಿ ಆಗಿರುವ ಕಾರಣ ಸರ್ಕಾರದಿಂದಲೇ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನದಿಯ ಎರಡೂ ಬದಿಯಲ್ಲಿ ತಡೆಗೋಡೆ ಅಗತ್ಯ. ಆದರೆ ಮೊದಲು ನೀರು ನುಗ್ಗುವ ಭಾಗದಲ್ಲಿ ಮಾತ್ರ ತಡೆಗೋಡೆ ನಿರ್ಮಿಸಬೇಕಿದೆ. ಪಾಲಿಕೆಯಿಂದ ಕುರುಬರಪಾಳ್ಯದ ಬಳಿ 43 ಲಕ್ಷ ರೂ. ವೆಚ್ಚದಲ್ಲಿ ನೀರು ಒಳನುಗ್ಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತುಂಗಾ ಜಲಾನಯನ ಭಾಗದಲ್ಲಿ ಮಳೆ ಹೆಚ್ಚಾದರೆ ಜಲಾಶಯದಿಂದ ಅಧಿಕ ನೀರನ್ನು ನದಿಗೆ ಹರಿಸಬೇಕಾಗುತ್ತದೆ. ಈ ವೇಳೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ವೆಂಕಟೇಶ್ವರನಗರ, ನ್ಯೂಮಂಡ್ಲಿ, ಗಾಂಧಿನಗರ, ಇಮಾಮ್‌ಬಾಡಾ, ವಿದ್ಯಾನಗರದ ಕೆಲ ಭಾಗದಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ. ನೆರೆ ನಿರ್ವಹಣೆ ಮಾಡಲು ಪಾಲಿಕೆಯಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ತುಂಗಾ ಹೂಳೆತ್ತುವುದು ಕಷ್ಟಸಾಧ್ಯ: ತುಂಗಾ ಜಲಾಶಯದಲ್ಲಿ ಹೂಳೆತ್ತುವುದು ಸದ್ಯಕ್ಕೆ ಕಷ್ಟಸಾಧ್ಯ ಎಂದು ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಲಾಶಯದ ಕೆಲ ಕ್ರಸ್ಟ್‌ಗೇಟ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಜಲಾಶಯದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಸರ್ಕಾರ ಬಗೆಹರಿಸಲಿದೆ. ಜತೆಗೆ ಅವಶ್ಯಕತೆ ಇರುವ ಕಡೆ ತುಂಗಾ ನದಿಗೆ ಚೆಕ್ ಡ್ಯಾಂ ನಿರ್ಮಿಸಲು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. ಕಳೆದ ವರ್ಷ ಬರ ಇದ್ದ ಕಾರಣ ಕುಡಿಯಲು ನೀರು ಒದಗಿಸುವುದಕ್ಕೂ ಸಮಸ್ಯೆ ಎದುರಾಗಿತ್ತು. ಹಾಗಾಗಿ ಈ ಬಾರಿ ಜಲಾಶಯದಿಂದ ಬೇಕಾಬಿಟ್ಟಿಯಾಗಿ ನೀರು ಹರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಭದ್ರಾ ಜಲಾಶಯಕ್ಕೆ ಡಿಶಿಕೆಗೆ ಆಹ್ವಾನ: ಭದ್ರಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹಾಗಾಗಿ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭದ್ರಾ ಜಲಾಶಯಕ್ಕೆ ಆಹ್ವಾನಿಸಲಾಗುವುದು. ಜು.29ರಂದು ಭದ್ರಾ ಕಾಡಾದಲ್ಲಿ ಸಭೆ ನಡೆಯಲಿದ್ದು ಅಲ್ಲಿ ನೀರು ಹೊರಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಭದ್ರಾದಿಂದಲೂ ನೀರು ಬಿಟ್ಟರೆ ಹೊನ್ನಾಳಿ, ಹಾವೇರಿ ಭಾಗದಲ್ಲಿ ಸಮಸ್ಯೆ ಉದ್ಭವವಾಗಲಿದೆ. ಆ ನಿಟ್ಟಿನಲ್ಲಿ ನೀರು ಹರಿಸುವ ಬಗ್ಗೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net