

ನವದೆಹಲಿ: ಇಂದು ಅಮ್ಮಂದಿರ ದಿನ. ಎಲ್ಲರೂ ತಮ್ಮ ತಮ್ಮ ಅಮ್ಮಂದಿರನ್ನು ನೆನಪಿಸಿಕೊಂಡು, ಅವರೊಂದಿಗೆ ಇರುವ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಪ್ರೀತಿ ಮತ್ತು ಗೌರವ ಸಲ್ಲಿಸುತ್ತಿದ್ದಾರೆ.
ಆದರೆ, ಇಲ್ಲೊಬ್ಬ ಮಗಳು ತಮ್ಮ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡು ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ಅವರೇ ಬಾನ್ಸುರಿ ಸ್ವರಾಜ್.
ಬಾನ್ಸುರಿ ಸ್ವರಾಜ್ ಅವರು ಸುಷ್ಮಾ ಸ್ವರಾಜ್ ಅವರ ಪುತ್ರಿ. ಅತಿ ಕಿರಿಯ ವಯಸ್ಸಿನಲ್ಲೇ ಸಚಿವೆಯಾದ ಹೆಗ್ಗಳಿಕೆಯೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಆದ ಛಾಪು ಮೂಡಿಸಿ, ಅನಾರೋಗ್ಯದ ವಿರುದ್ಧ ಹೋರಾಡುತ್ತಲೇ ಅಸುನೀಗಿದವರು ಸುಷ್ಮಾ ಸ್ವರಾಜ್. ಇಂಥ ನಾಯಕಿಯನ್ನು ಕಳೆದುಕೊಂಡಿದ್ದಕ್ಕಾಗಿ ಇಡೀ ದೇಶವೇ ದುಃಖತಪ್ತವಾಗಿತ್ತು.
ಇಂಥ ತಾಯಿಯನ್ನು ಕಳೆದುಕೊಂಡಿರುವ ಬಾನ್ಸುರಿ ಸ್ವರಾಜ್, ಅಮ್ಮಂದಿರ ದಿನದ ಶುಭಾಶಯಗಳು @SushmaSwaraj. ಪ್ರತಿ ಉಸಿರಿನಲ್ಲೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಮ್ಮ... ಎಂದು ಟ್ವೀಟ್ ಮಾಡಿದ್ದಾರೆ.
ತಾವು ತುಂಬಾ ಚಿಕ್ಕವರಿದ್ದಾಗ ಅಮ್ಮ ಸುಷ್ಮಾ ಸ್ವರಾಜ್ ತಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಹಳೆಯ ಫೋಟೋದೊಂದಿಗೆ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಚೇತರಿಸಿಕೊಳ್ಳುತ್ತಿದ್ದರಾದರೂ 2019ರ ಆಗಸ್ಟ್ನಲ್ಲಿ ಅಸ್ವಸ್ಥಗೊಂಡು ಏಮ್ಸ್ಗೆ ದಾಖಲಾಗಿದ್ದರು. ಅಲ್ಲಿ ಹೃದಯಾಘಾತವಾಗಿದ್ದರಿಂದ ಆಗಸ್ಟ್ 6ರಂದು ತಮ್ಮ 67ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಇವರು ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು.