ದೆಹಲಿಯಲ್ಲಿ ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಭೂಕಂಪ

Delhi Earthquake
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ರಿಕ್ಟರ್​ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ನಷ್ಟದ ಕುರಿತು ವರದಿಯಾಗಿಲ್ಲ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಇದೇ ತೀವ್ರತೆಯಲ್ಲಿ ಮೂರನೇ ಬಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್​ಸಿಎಸ್​) ತಿಳಿಸಿದೆ. ಈ ಹಿಂದೆ ಏಪ್ರಿಲ್​ 12 ಹಾಗೂ 13ರಂದು ಕೂಡ ಭೂಕಂಪ ಸಂಭವಿಸಿತ್ತು.

ಭಾನುವಾರ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಈಶಾನ್ಯ ದೆಹಲಿಯ ವಾಜಿಪುರ ಆಗಿದೆ ಎಂದು ಎನ್​ಸಿಎಸ್​ನ ನಿರ್ವಹಣಾ ಮುಖ್ಯಸ್ಥ ಜೆ.ಎಲ್​. ಗೌತಮ್​ ಮಾಹಿತಿ ನೀಡಿದ್ದಾರೆ.

ಈ ಮೊದಲು ಸಂಭವಿಸಿದ ಭೂಕಂಪಗಳಿಗೂ ಕೂಡ ಇದರ ಸುತ್ತಮುತ್ತಲಿನ ಪ್ರದೇಶಗಳೇ ಕೇಂದ್ರಸ್ಥಾನಗಳಾಗಿದ್ದವು. ಏಪ್ರಿಲ್​ 12ರಂದು 3.5 ಹಾಗೂ ಏಪ್ರಿಲ್​ 13ರಂದು 2.7 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಅಂದಾಜು ಐದು ಕಿ.ಮೀ. ಆಳದಲ್ಲಿ ಇದರ ಕೇಂದ್ರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಭೂಕಂಪನದ ನಾಲ್ಕನೇ ವಲಯಕ್ಕೆ ಸೇರುತ್ತದೆ. 2004ರಲ್ಲಿ 2.8 ತೀವ್ರತೆಯ ಭೂಕಂಪವಾಗಿತ್ತು. ಇದಕ್ಕೂ ಹಿಂದೆ 2001ರಲ್ಲಿ 3.4 ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಇದಕ್ಕೂ ಹಿಂದೆ ಅಂದರೆ, 1956ರಲ್ಲಿ ಬುಲಂದ್​ಶಹರ್​ ಬಳಿ 6.7 ತೀವ್ರತೆಯ ಭಾರಿ ಭೂಕಂಪವಾಗಿತ್ತು ಅ ಎಂದು ಅಧಿಕಾರಿಗಳು ಅಂಕಿ-ಅಂಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net