ದಿವಾಳಿತನ ನಿಯಮ ಬ್ಯಾಂಕ್​ಗಳಿಗೆ ನಷ್ಟ?

Money
Published on

ನವದೆಹಲಿ: ದಿವಾಳಿತನ ಕಾಯ್ದೆಗೆ ಪ್ರಸ್ತಾವಿಸಲಾಗಿರುವ ಬದಲಾವಣೆಯಿಂದ ಬ್ಯಾಂಕ್​ಗಳಿಗೆ ನಷ್ಟವಾಗುವ ಸಾಧ್ಯತೆ ಇದೆ. ‘ಆದಾಯ ವಿತರಣೆಯ ಸಮಾನ ಯೋಜನೆ’ ಅನ್ವಯ ಹೊಸ ತಿದ್ದುಪಡಿಯನ್ನು ತರಲು ಜನವರಿಯಲ್ಲಿ ಮಂಡಿಸಿದ ಚರ್ಚಾ ದಸ್ತಾವೇಜಿನಲ್ಲಿ ಸರ್ಕಾರ ಉಲ್ಲೇಖಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ ದಿವಾಳಿತನ ಘೋಷಿಸಿಕೊಂಡ ಸುಸ್ತಿದಾರರಿಂದ ಬ್ಯಾಂಕ್​ಗಳಿಗೆ ವಸೂಲಾಗುವ ಮೊತ್ತ ಕಡಿಮೆ ಆಗುತ್ತದೆ ಎನ್ನಲಾಗಿದೆ. ಹೀಗಾಗಿ ಈ ನಿಯಮವು ಬ್ಯಾಂಕ್​ಗಳ ದೃಷ್ಟಿಯಿಂದ ಲಾಭದಾಯಕವಲ್ಲ ಎಂದು ತಜ್ಞರು ಹೇಳಿದ್ದಾರೆ.

ಕಾರ್ಪೆರೇಟ್ ಸಾಲಗಾರ ದಿವಾಳಿ ಘೋಷಿಸಿಕೊಂಡರೆ, ಆತನ ಆದಾಯದ ಮೇಲೆ ಮೊದಲ ಹಕ್ಕು ಸಾಲದಾತರು ಅಂದರೆ ಬ್ಯಾಂಕ್​ಗಳು, ಬಾಂಡ್ ಹೋಲ್ಡರ್​ಗಳಿಗೆ ಇರುತ್ತದೆ. ಆದರೆ, ಇದು ಸಾಲಗಾರನ ದಿವಾಳಿತನ ಮೌಲ್ಯಕ್ಕೆ ಸೀಮಿತವಾಗಿರುತ್ತದೆ. ದಿವಾಳಿತನ ಮೀರಿದ ಮೌಲ್ಯವನ್ನು ಎಲ್ಲ ಸಾಲದಾತರಿಗೆ ಸಮಾನವಾಗಿ ಹಂಚಲಾಗುತ್ತದೆ. ಜತೆಗೆ ಅಸುರಕ್ಷಿತ ಮಾರ್ಗದಲ್ಲಿ ಸಾಲ ನೀಡಿದವರು, ಸಾಲಕ್ಕೆ ಸಾಮಗ್ರಿ ಅಥವಾ ಸೇವೆ ನೀಡಿ ಬಾಕಿಗಾಗಿ ಕಾಯುತ್ತಿರುವವರು, ಸರ್ಕಾರಕ್ಕೆ ಬರಬೇಕಾದ ಶಾಸನಾತ್ಮಕ ಬಾಕಿಗಳು ಇದರಡಿಗೆ ಬರುತ್ತವೆ. ಹೀಗಾಗಿ ಪ್ರಸ್ತಾವಿತ ತಿದ್ದುಪಡಿಯು ಸಾಲ ನೀಡುವ ಸುರಕ್ಷಿತ ಮಾರ್ಗಗಳಾದ ಬ್ಯಾಂಕ್​ಗಳಿಗೆ ಅನುಕೂಲವಾಗಿಲ್ಲ. ಇದು ಸಾಲ ವಿತರಣೆಯ ವ್ಯವಸ್ಥೆಯ ಮೇಲೆ ಅಂತಿಮವಾಗಿ ಪರಿಣಾಮ ಬೀರುತ್ತದೆ. ಸಾಲ ನೀಡುವಾಗ ಬ್ಯಾಂಕ್​ಗಳು ಹೆಚ್ಚಿನ ಅಡಮಾನವನ್ನು ಅಪೇಕ್ಷಿಸಲು ಇದು ದಾರಿ ಮಾಡಿಕೊಡುತ್ತದೆ ಎಂದು ದಿವಾಳಿತನ ವಿಷಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ದಿವಾಳಿತನ ಘೋಷಣೆಯಾದ ಪ್ರಕರಣಗಳು ಸಾಮಾನ್ಯವಾಗಿ ಕೋರ್ಟ್ ಮೆಟ್ಟಿಲು ಹತ್ತಿರುವುದರಿಂದ ವಸೂಲಾತಿ ಬಹಳ ವಿಳಂಬ ಆಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ವಸೂಲಾತಿಯಲ್ಲೂ ಖೋತಾ ಆದರೆ ಸಾಲದಾತರು ಯಾವ ಭರವಸೆ ಮೇಲೆ ಸಾಲ ನೀಡಿಯಾರು? ಎಂದು ತಜ್ಞರು ಪ್ರಶ್ನಿಸಿದ್ದಾರೆ. ಸದ್ಯ ಪ್ರಸ್ತಾವಿತ ಬದಲಾವಣೆ ಬಗ್ಗೆ ಸರ್ಕಾರ ಸಾರ್ವಜನಿಕರಿಂದ ಆಕ್ಷೇಪ, ಸಲಹೆಯನ್ನು ಆಹ್ವಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net