ಜಾನಪದ ಹಾಡುಗಳ ಬ್ಯಾಂಕ್ ಸಂಕಮ್ಮ

sankamma 16 mar 20
Published on

ಸಾಂಪ್ರದಾಯಿಕ ಹಾಡುಗಳು, ಅಳಿವಿನಂಚಿಗೆ ಸಾಗುತ್ತಿವೆ ಎಂಬ ಆತಂಕದ ಮಧ್ಯೆ, ಈ ಮಾತನ್ನು ಸುಳ್ಳಾಗಿಸಿ ಸಾಂಪ್ರದಾಯಿಕ ಹಾಡುಗಳನ್ನು ಜತನವಾಗಿ ಉಳಿಸಿಕೊಂಡು ಬಂದಿದ್ದಾರೆ ಬಾಗಲಕೋಟೆ ಜಿಲ್ಲೆಯ ಸಂಕಮ್ಮ.

ಸಂಪ್ರದಾಯಗಳಿಲ್ಲದ ಸಮಾಜವಿಲ್ಲ, ಸಂಸ್ಕೃತಿಯಿಲ್ಲ. ಅವು ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಅದರದೇ ಆದ ವಿಶಿಷ್ಟ ಸಂಪ್ರದಾಯಗಳಿರುತ್ತವೆ. ನೆಲಮೂಲ ಸಂಸ್ಕೃತಿಯ ಪ್ರತೀಕವಾದ ಸಾಂಪ್ರದಾಯಿಕ ಪದಗಳ ಹಾಡುಗಾರಿಕೆ ಒಂದು ವಿಶಿಷ್ಟವಾದ ಕಲೆಯಾಗಿದೆ. ಸಾಂಪ್ರದಾಯಿಕ ಹಾಡುಗಾರರು ಅಳಿವಿನಂಚಿಗೆ ಸಾಗುತ್ತಿದ್ದಾರೆ ಎಂಬ ಆತಂಕದ ಮಧ್ಯೆ, ಈ ಮಾತನ್ನು ಸುಳ್ಳಾಗಿಸಿ ಸಾಂಪ್ರದಾಯಿಕ ಹಾಡುಗಳನ್ನು ಜತನವಾಗಿ ಉಳಿಸಿಕೊಂಡು ಬಂದಿರುವ ಹಾಡುಗಾರ್ತಿ ರಾಮದುರ್ಗದ ಸಂಕಮ್ಮ ಗುದಗಾಪೂರ.

ಮೂಲತಃ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರ ಪಟ್ಟಣದವರಾದ ಸಂಕಮ್ಮಳ ತಂದೆ ಕೇಮಣ್ಣಪ್ಪ ಮತ್ತು ತಾಯಿ ಚಂಪಾವತಿ. ತಾಯಿ ಚಂಪಾವತಿ ಜಾನಪದ ಕಲಾವಿದೆ. ಸಾಂಪ್ರದಾಯಿಕ ಪದಗಳನ್ನು ಹಾಡುವದರಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ತಾಯಿಯ ನೆರವಿನಿಂದ ಬಾಲ್ಯದಲ್ಲಿಯೇ ಸಂಕಮ್ಮ ಸುಲಭವಾಗಿ ಹಾಡುವದನ್ನು ರೂಢಿಸಿಕೊಂಡರು. ಅಲ್ಲದೇ 200ಕ್ಕಿಂತ ಅಧಿಕ ಸಾಂಪ್ರದಾಯಿಕ ಪದಗಳನ್ನು ಕಲಿತು, ತಾಯಿಯ ಜತೆ ಸಮಾರಂಭಗಳಲ್ಲಿ ಸುಶ್ರಾವ್ಯವಾಗಿ ಹಾಡತೊಡಗಿದರು.

ನಂತರ 1994ರಲ್ಲಿ ನೇಕಾರಿಕೆಯಲ್ಲಿ ಉಪಜೀವನ ಮಾಡುತ್ತಿರುವ ಮಾರುತಿಯವರನ್ನು ಮದುವೆಯಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ನಿಂಗಾಪುರ ಪೇಟೆಗೆ ಬಂದರು. ನೇಕಾರಿಕೆಯ ವೃತ್ತಿಯೊಂದಿಗೆ ಜೀವನ ಮಾಡುತ್ತ, ಬನಶ್ರೀ, ಜಾನಪದ ಕಲಾ ತಂಡವನ್ನು ಕಟ್ಟಿದರು. ಈ ತಂಡದಲ್ಲಿ ಗೀತಾ ಮಹೀಂದ್ರಕರ, ನಂದಾ ಕೊಳದೂರ ಹಾಗೂ ಗೀತಾ ಕೋಪರ್ಡೆ ಇವರು ಕಳೆದ 25 ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಂಕಮ್ಮನವರು ಕಲಿತಿದ್ದು ಮೂರನೆಯ ತರಗತಿಯಾದರೂ ಇವರ ಬತ್ತಳಿಕೆಯಲ್ಲಿ ಇರೋದು 300ಕ್ಕೂ ಅಧಿಕ ಹಾಡುಗಳ ಗುಚ್ಛ.

ಮದುವೆಗೊಂದು ಹಾಡು, ಮಾಂಗಲ್ಯಧಾರಣೆ, ದಿಬ್ಬಣಕ್ಕೆ ಒಂದು ಹಾಡು, ಹೆಣ್ಣು ಮಗಳನ್ನು ಕಳಿಸಿಕೊಡುವಾಗ, ಜೋಗುಳ ಬೀಸುವ ಕಲ್ಲಿನ..... ಹೀಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಸಂಪ್ರದಾಯದ ಹಾಡುಗಳನ್ನು ಲೀಲಾಜಾಲವಾಗಿ ಹಾಡುವದನ್ನು ಸಂಕಮ್ಮ ಬಾಯಿಪಾಠವಾಗಿ ಹಾಡುವದು ವಿಶೇಷವಾಗಿದೆ. ಯಾರಿಂದಲೂ ಸಂಗೀತ ಕಲಿಯದ, ಸಂಗೀತದ ಗಂಧ ಗಾಳಿ ಇಲ್ಲದೇ ಇದ್ದರೂ ಸಂಕಮ್ಮಳ ಕಂಚಿನ ಕಂಠದಲ್ಲಿ ಕೇಳುವ ಹಾಡು ಶ್ರೋತೃಗಳನ್ನು ತಡೆದು ನಿಲ್ಲಿಸುತ್ತವೆ. ಯಾರದೇ ಮನೆಯಿರಲಿ, ಮಂದಿರವಿರಲಿ, ಕಾರ್ಯಕ್ರಮವಿರಲಿ ಅಲ್ಲಿ ಇವರು ಹಾಡಿ ಮನರಂಜಿಸುತ್ತಾರೆ. ಅವರ ಜನಪದ ಹಾಡುಗಳಲ್ಲಿ ನವರಸಗಳೂ ತುಂಬಿ ಕೇಳಿದವರ ಮನಸ್ಸನ್ನು ಒಂದರೆಗಳಿಗೆ ತನ್ನ ಲೋಕದೆಡೆ ಸೆಳೆಯುತ್ತಿತ್ತು. ಇವರ ಸಂಪ್ರದಾಯದ ಹಾಡುಗಳನ್ನು ಹಾಡುವ ರೀತಿ ಮತ್ತು ಕೇಳುವುದೇ ಸೊಗಸು. ಹಾಡುಗಳ ಸಂಖ್ಯೆಗೆ ಲೆಕ್ಕವಿಲ್ಲ. ಈ ಹಾಡುಗಳಲ್ಲಿ ಜನ ಜೀವನವೇ ಪ್ರತಿಬಿಂಬಿತವಾಗಿದೆ.

ಸಂಪ್ರದಾಯದ ಹಾಡುಗಳು ನನಗೆ ಹುಟ್ಟಿನಿಂದಲೇ ಅಂಟಿಕೊಂಡು ಬಂದಿವೆ. ಅವುಗಳನ್ನು ಆಸಕ್ತಿ ಇರುವ ಇತರ ಮಹಿಳೆಯರಿಗೂ ಕಲಿಸಿಕೊಡುವ ಮೂಲಕ ಸಾಂಪ್ರದಾಯಿಕ ಕಲೆ ಉಳಿಸಲು ಶ್ರಮಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು ಸಂಕಮ್ಮ. ನನ್ನ 45 ವರ್ಷಗಳ ಕಲಾ ಸೇವೆ ನನಗೆ ಖುಷಿ ತಂದಿದೆ. ನಾನು ಹಾಡುವದನ್ನು ಪರಿಗಣಿಸಿ ಸರ್ಕಾರದವರು ನನಗೆ ಪ್ರಶಸ್ತಿ ನೀಡುತ್ತಿರುವದು ನನಗಷ್ಟೇ ಅಲ್ಲದೇ ಇಡೀ ನೇಕಾರ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಖುಷಿ ತಂದಿದೆ. ನಮ್ಮನ್ನು ಗುರುತಿಸಿದ್ದಾರೆ, ಬಾಳ ಸಂತೋಷಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು ಸಂಕಮ್ಮ. ನನಗೆ ತಂದೆ-ತಾಯಿ, ಅತ್ತೆ-ಮಾವ, ಪತಿ ಮಾರುತಿ, ಜಾನಪದ ಗುರುಗಳಾದ ಸಿದ್ದು ಮೋಟೆ ಮುಂತಾದವರ ಪ್ರೋತ್ಸಾಹ ಸ್ಮರಣೀಯ ಎಂದು ಸ್ಮರಿಸಿಕೊಳ್ಳುತ್ತಾರೆ ಸಂಕಮ್ಮ ಗುದಗಾಪುರ.

ಸಂಕಮ್ಮ ತಮ್ಮ ತಂಡದೊಂದಿಗೆ ಚಿಕ್ಕಬಳ್ಳಾಪುರ, ದಾವಣಗೇರಿ, ರಾಯಚೂರ, ವಿಜಯಪುರ, ಕೊಪ್ಪಳ, ಮಂಡ್ಯ, ಧಾರವಾಡ, ಹಾವೇರಿ, ಬಾಗಲಕೋಟೆ, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ನಡೆದ ಜಾನಪದ ಉತ್ಸವಗಳಲ್ಲಿ ಸಂಪ್ರದಾಯ ಪದಗಳನ್ನು ಪ್ರಸ್ತುತಪಡಿಸಿ ಸೈ ಎನಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಪದಗಳು ಜನಪದ ಸಾಹಿತ್ಯ ಪರಂಪರೆಯ ಒಂದು ವಿಶಿಷ್ಟ ಗೀತ ಪ್ರಕಾರಗಳು ಪ್ರಸ್ತುತ ಸಂದರ್ಭಗಳಲ್ಲಿ ಬಳಕೆಯಲ್ಲಿಲ್ಲದ ಕಾರಣ, ಈ ಪ್ರಕಾರಗಳು ಈಗ ಅಳಿವಿನ ಅಂಚಿನಲ್ಲಿವೆ. ಜನಪದ ಸೊಗಡಿನ ಇಂಥ ವಿಶಿಷ್ಟ ಹಾಡುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಕಮ್ಮನವರು ಪ್ರಯತ್ನಿಸುತ್ತಿರುವದು ಶ್ಲಾಘನೀಯ. ಇವರ ಸಂಪರ್ಕಕ್ಕೆ: 8197327266.

ಹಲವು ಪ್ರಶಸ್ತಿ

ಸಂಕಮ್ಮ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ. ಸಂಕಮ್ಮ ಜಾನಪದ ಶ್ರೀ, ಜಾನಪದ ಕೋಗಿಲೆ, ಜಾನಪದ ಕಲಾ ಐಸಿರಿ, ಜಾನಪದ ಸಿಂಧೂರ ಮುಂತಾದ ಹಲವು ಪ್ರಶಸ್ತಿ-ಪುರಸ್ಕಾರಗಳಿಗ ಭಾಜನರಾಗಿದ್ದಾರೆ. ಅಲ್ಲದೇ ಸಂಕಮ್ಮ ಅವರನ್ನು 2017ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆಹ್ವಾನಿಸಿ ಹೊನ್ನಬಿತ್ತೇವು ಹೊಲಕೆಲ್ಲ ಎಂಬ ಘೊಷವಾಕ್ಯದ ನೆನಪಿನಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಇದೀಗ ಜಾನಪದ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಸುರೇಶ ಗುದಗನವರ ರಾಮದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net