

ಢಾಕಾ: ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದು ಮುಖಂಡ ಚಿನ್ಮಯ ಕೃಷ್ಣ ದಾಸ ಸೇರಿ 17 ಹಿಂದು ನಾಯಕರ ಬ್ಯಾಂಕ್ ಖಾತೆಗಳನ್ನು 30 ದಿನಗಳವರೆಗೆ ಸ್ಥಗಿತಗೊಳಿಸು ವಂತೆ ಬಾಂಗ್ಲಾದೇಶದ ಹಣಕಾಸು ಅಧಿಕಾರಿಗಳು ಆದೇಶಿಸಿ ದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶ ಬ್ಯಾಂಕ್ನ ಹಣಕಾಸು ಗುಪ್ತಚರ ಘಟಕ (ಬಿಎಫ್ಐಯು) ಗುರುವಾರ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಈ ನಿರ್ದೇಶನ ಕಳುಹಿಸಿದೆ. ಖಾತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟುಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ಜತೆಗೆ ಈ 17 ವ್ಯಕ್ತಿಗಳ ಒಡೆತನದ ಆಸ್ತಿಗಳು, ಎಲ್ಲಾ ರೀತಿಯ ವ್ಯವಹಾರಗಳ ಸ್ಟೇಟ್ವೆುಂಟ್ ಮುಂದಿನ ಮೂರು ದಿನಗಳಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ.
ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಸಂಸ್ಥೆಯ ವಕ್ತಾರರೂ ಆದ ಚಿನ್ಮಯ ಕೃಷ್ಣ ದಾಸ ಅವರನ್ನು ಕಳೆದ ಸೋಮವಾರ ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಬಂಧಿಸಲಾಗಿತ್ತು. ಮಂಗಳವಾರ ನ್ಯಾಯಾಲಯ ಜಾಮೀನು ನಿರಾಕರಿಸಿದ ಕಾರಣ ಜೈಲಿಗೆ ಕಳುಹಿಸಲಾಗಿದೆ. ಅವರು ಇಸ್ಕಾನ್ನ ಮಾಜಿ ವಕ್ತಾರರೂ ಆಗಿದ್ದಾರೆ.
ಹಿಂದುಗಳ ರಕ್ಷಣೆ ಬಾಂಗ್ಲಾ ಸರ್ಕಾರದ ಜವಾಬ್ದಾರಿ
ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿ ಅಲ್ಲಿನ ಸರ್ಕಾರದ್ದು. ಹಿಂಸಾಚಾರದ ಘಟನೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ನಾಗರಿಕರ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ಬಾಂಗ್ಲಾದೇಶ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಅಲ್ಲಿನ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಬಂಧಿತ ಹಿಂದು ಸನ್ಯಾಸಿ ಚಿನ್ಮಯ ಕೃಷ್ಣ ದಾಸ ಅವರ ಪ್ರಕರಣವನ್ನು ನ್ಯಾಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಬೇಕು. ಹಿಂದುಗಳು ಸಹಿತ ಇತರ ಅಲ್ಪಸಂಖ್ಯಾತರ ವಿರುದ್ಧದ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು, ಅವರ ಮನೆಗಳು, ಆಸ್ತಿಗಳು, ದೇವಾಲಯಗಳ ಮೇಲೆ ದಾಳಿ ನಡೆಯುತ್ತಿರುವುದು ತೀವ್ರ ಕಳವಳಕಾರಿ ಎಂದು ವಿದೇಶಾಂಗ ಸಚಿವಾಲಯ ಕೂಡ ಹೇಳಿದೆ.