

ವಾರಾಣಸಿ: ಬಾಂಗ್ಲಾದೇಶದ ಮೂಲ ನಿವಾಸಿಯಾಗಿರುವ ಯುವಕನೊಬ್ಬ ಕಾಶಿ ಜಂಗಮವಾಡಿಮಠದಲ್ಲಿ ನಡೆದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಜನ್ಮದಿನೋತ್ಸವದಲ್ಲಿ ಜಂಗಮ ದೀಕ್ಷೆ ಸ್ವೀಕರಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಅಖಂಡ ಭಾರತದ ಭಾಗವೇ ಆಗಿದ್ದ ಸದ್ಯ ಮುಸ್ಲಿಂ ರಾಷ್ಟ್ರವಾಗಿರುವ ಬಾಂಗ್ಲಾದೇಶದ ಮೂಲ ನಿವಾಸಿ ಪಂಕಜ ರಾಯ್ ಕಾಶಿ ಜಗದ್ಗುರುಗಳ ಆನ್ಲೈನ್ ಆಶೀರ್ವಚನದಿಂದ ಪ್ರೇರೇಪಿತನಾಗಿ ಕಳೆದ ನಾಲ್ಕು ವರ್ಷಗಳಿಂದ ಜಗದ್ಗುರುಗಳ ಶಿಷ್ಯರಾಗಿದ್ದಾರೆ. ಕಳೆದ ವರ್ಷ ಕಾಶಿ ಜಗದ್ಗುರುಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿರುವ ಪಂಕಜ್ ರಾಯ್ ಬಾಂಗ್ಲಾ ದೇಶದಲ್ಲಿ 500 ಜನರನ್ನು ಸಂಘಟಿಸಿ ಕಾಶಿ ಜಂಗಮವಾಡಿ ಶಾಖಾಮಠ ಸ್ಥಾಪನೆಗೆ ಮುಂದಾಗಿದ್ದಾರೆ.
ಕಾಶಿ ಜಗದ್ಗುರುಗಳ 77ನೇ ಜನ್ಮದಿನದ ಅಂಗವಾಗಿ ಜಂಗಮವಾಡಿಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ವಿಶ್ವಾರಾಧ್ಯರ ಮಹಾರುದ್ರಾಭಿಷೇಕ, ಹೋಮ-ಹವನದಲ್ಲಿ ಜಗದ್ಗುರುಗಳು ಪಂಕಜ್ ರಾಯ್ ಅವರಿಗೆ ಜಂಗಮ ದೀಕ್ಷೆ ನೀಡಿ ನೈಷ್ಟಿಕ ಬ್ರಹ್ಮಚರ್ಯ ಬೋಧಿಸಿ ದಂಡ, ಜೋಳಿಗೆ ನೀಡಿ ಆಶೀರ್ವದಿಸಿದರು.
ದಕ್ಷಿಣದಲ್ಲಿ ಜಂಗಮವಾಡಿಮಠ: ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕಾಶಿ ಜಗದ್ಗುರುಗಳು, 77ನ್ನು ಹಿಂದಿಯಲ್ಲಿ ಸಾಥ್ ಸಾಥ್ ಎಂದು ಕರೆಯಲಾಗುತ್ತದೆ. ಸಾಥ್ ಸಾಥ್ ಎಂದರೆ ಜೊತೆ ಜೊತೆ ಎಂಬ ಅರ್ಥವಿದೆ. ನಮ್ಮ 77ನೇ ಜನ್ಮದಿನದ ಸಂದರ್ಭದಲ್ಲಿ ನಮ್ಮ ಜೊತೆ ಭಕ್ತರ ಸಹಕಾರ, ಭಕ್ತರ ಕಲ್ಯಾಣಕ್ಕೆ ನಮ್ಮ ಸಹಕಾರದ ಫಲವಾಗಿ ಬಾಂಗ್ಲಾದೇಶಕ್ಕೆ ಓರ್ವ ಸ್ವಾಮಿ ದೊರೆತಿದ್ದಾರೆ. ಜತೆಗೆ ದೇಶದ ದಕ್ಷಿಣದ ತುದಿಯಲ್ಲಿರುವ ರಾಮೇಶ್ವರಂನಲ್ಲಿ ಜಂಗಮವಾಡಿಮಠ ನಿರ್ವಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.