

ಬೆಂಗಳೂರು: ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ವಿರುದ್ಧವಾಗಿ ಸಾಲುಸಾಲು ಟ್ವೀಟ್ ಮಾಡುವ ಮೂಲಕವಾಗಿ ವಾಗ್ದಾಳಿ ಮಾಡಿದ್ದಾರೆ.
ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಮಾನ್ಯ ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದಾಗಿದೆ. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎನ್ನುವುದು ನನ್ನ ಕಳಕಳಿ ಎಂದಿದ್ದಾರೆ.
ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾಗಿದೆ. ಆದರೆ ಕರ್ನಾಟಕ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯವೂ ಆಗಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ. ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು ಎಂದು ಬಿಜೆಪಿ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೊಸ ದಶಪಥ ಹೆದ್ದಾರಿ ಜನರ ಬದುಕು ಕಟ್ಟುವ ರಹದಾರಿಯಷ್ಟೇ ಆಗಲಿ. ಅದು ಬಿಟ್ಟು ಕೆಲವರ ಪಾಲಿನ ಎಟಿಎಂ ಆಗಿ, ಸ್ಥಳೀಯ ಜನರ ಬದುಕು ಕಸಿಯುವ ಹೆಮ್ಮಾರಿ ಆಗದಿರಲಿ ಎಂದು ಹೇಳಿದ್ದಾರೆ.