ತಮಿಳು ಸಿನಿಮಾದಲ್ಲಿ ಚಾನ್ಸ್​ ಕೊಡಿಸೋದಾಗಿ ಬೆಂಗಳೂರಿನ ಮಾಡೆಲ್​ಗೆ ವಂಚನೆ

Fraud
Published on

ಬೆಂಗಳೂರು: ಮೋಸ ಮಾಡುವವರು ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೆ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ತಮಿಳು ನಟ ರಾಘವ ಲಾರೆನ್ಸ್​ ನಟನೆಯ 25ನೇ ಚಿತ್ರದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ವ್ಯಕ್ತಿಯೋರ್ವ ನಟಿ, ಮಾಡೆಲ್​ಗೆ ಮೋಸ ಮಾಡಿರುವ ಘಟನೆ ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ನಟಿ ಕಮ್​ ಮಾಡಲ್​ ನಂದಿತಾ ಶೆಟ್ಟಿ ಸಿನಿಮಾದಲ್ಲಿ ಆ್ಯಕ್ಟ್​ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮೂವೀ ಲಿಂಗ್​ ಜಾಹೀರಾತು ಮೂಲಕ ಕ್ಯಾಸ್ಟಿಂಗ್​ ಡೈರೆಕ್ಟರ್​ ಸುರೇಶ್​ ಕುಮಾರ್​ ಎಂಬಾತನ ಪರಿಚಯವಾಗಿದೆ. ಬಳಿಕ ತಾನು ರಾಘವ ಲಾರೆನ್ಸ್​ ನಟನೆಯ ಹಂಟರ್​ ಚಿತ್ರದ ಕ್ಯಾಸ್ಟಿಂಗ್​ ಡೈರೆಕ್ಟರ್​ ಎಂದು ಹೇಳಿಕೊಂಡಿದ್ದು, ಆ್ಯಕ್ಟಿಂಗ್​ ಚಾನ್ಸ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 1.71 ಲಕ್ಷ ರೂಪಾಯಿ ಹಣ ಪಡೆದಿದ್ದಾನೆ.

ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ, ವಿದೇಶದಲ್ಲಿ ಶೂಟಿಂಗ್ ಇರುತ್ತೆ ಪಾಸ್ ಪೋರ್ಟ್, ಟಿಕೆಟ್ ಚಾರ್ಜ್ ಎಂದು ನಾನಾ ಕಾರಣಗಳನ್ನು ನೀಡಿ ಸುರೇಶ್​ ನಂದಿತಾಗೆ ವಂಚಿಸಿದ್ದಾನೆ. ವಂಚಕನ ಮಾತು ನಂಬಿ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ ಪಾವತಿಸಿದ್ದ ನಂದಿತಾ, ಅನುಮಾನ ಬಂದು ಕ್ರಾಸ್ ಚೆಕ್ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿರುವ ನಂದಿನಿ ವಂಚಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. FIR ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

Nanditha Shetty
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net