ಸರ್ಕಾರ ತನ್ನ ಕೆಲಸ ಮಾಡಿದೆ, ಇಷ್ಟಾದರೂ... ಒಲಿಂಪಿಕ್ಸ್​ನಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ ಪ್ರಕಾಶ್ ಪಡುಕೋಣೆ ಕಿಡಿ

Prakash Padukone
Published on

ಪ್ಯಾರಿಸ್​: 33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತದ ಭರವಸೆಯ ಆಟಗಾರನಾಗಿದ್ದ ಲಕ್ಷ್ಯ ಸೇನ್ ಸೋಲುವುದರೊಂದಿಗೆ ಪದಕದ ಆಸೆಯೂ ಅಂತ್ಯಗೊಂಡಿದೆ. ಈ ಬಾರಿ ಬ್ಯಾಡ್ಮಿಂಟನ್​ನಿಂದ ಭಾರತಕ್ಕೆ ಅಧಿಕ ಪದಕಗಳನ್ನು ಗೆಲ್ಲುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. ಪಿವಿ ಸಿಂಧು ಸೇರಿದಂತೆ ದೇಶದ ಟಾಪ್​ ಮೋಸ್ಟ್​ ಶಟ್ಲರ್​ಗಳು ಈ ಬಾರಿ ಪದಕ ಗೆಲ್ಲಲು ವಿಫಲವಾಗಿದ್ದು, ಆಟಗಾರರ ಈ ನೀರಸ ಪ್ರದರ್ಶನಕ್ಕೆ ಬ್ಯಾಡ್ಮಿಂಟನ್​ ದಂತಕಥೆ ಪ್ರಕಾಶ್​ ಪಡುಕೋಣೆ ಮಾತನಾಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

33ನೇ ಆವೃತ್ತಿಯ ಒಲಿಂಪಿಕ್ಸ್​ನಲ್ಲಿ ಭಾರತ ಈವರೆಗೂ ಮೂರು ಪದಕಗಳನ್ನು ಗೆಲ್ಲಲಷ್ಟೇ ಶಕ್ತವಾಗಿದ್ದು, ಈ ಮೂರು ಪದಕಗಳು ಶೂಟಿಂಗ್ ವಿಭಾಗದಲ್ಲಿ ಬಂದಿದೆ. 2008ರ ನಂತರ ಇದೇ ಮೊದಲ ಬಾರಿಗೆ ಭಾರತದ ಶಟ್ಲರ್‌ಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿರುವುದು. 2012 ರ ಒಲಿಂಪಿಕ್ಸ್‌ನಲ್ಲಿ, ಸೈನಾ ನೆಹ್ವಾಲ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್​ನಲ್ಲಿ ದೇಶಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದರು. ಆ ಬಳಿಕ ಪಿವಿ ಸಿಂಧು ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡಕ್ಕಿಂತ ಹೆಚ್ಚು ಪದಕಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯೆಲ್ಲವೂ ಈಗ ಹುಸಿಯಾಗಿದೆ.

ಒಲಿಂಪಿಕ್ಸ್‌ಗೂ ಮುನ್ನ ಭಾರತೀಯ ಅಥ್ಲೀಟ್‌ಗಳ ಪ್ರತಿಯೊಂದು ಬೇಡಿಕೆಯೂ ಈಡೇರಿದ್ದು, ಅವರಿಂದ ವಿಶೇಷವಾಗಿ ಬ್ಯಾಡ್ಮಿಂಟನ್ ತಂಡದಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಿದ್ದೇವು. ಆದರೆ ಬ್ಯಾಡ್ಮಿಂಟನ್‌ನಿಂದ ಒಂದೇ ಒಂದು ಪದಕವನ್ನು ಗೆಲ್ಲಲಾಗಲಿಲ್ಲ ಎಂಬುದು ನನಗೆ ಸ್ವಲ್ಪ ನಿರಾಶೆ ತಂದಿದೆ. 64ರಲ್ಲಿ ಮಿಲ್ಕಾ ಸಿಂಗ್​, 80ರಲ್ಲಿ ಪಿಟಿ ಉಷಾ ನಂತರ ನಾವು ನಾಲ್ಕನೇ ಸ್ಥಾನ ಗಳಿಸಿದ್ದೇವೆ. ನನ್ನ ಪ್ರಕಾರ ಸಹ ಆಟಗಾರರು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಇದು ಸೂಕ್ತ ಸಮಯ ಎಂದು ಭಾವಿಸುತ್ತೇನೆ.

ಕಳೆದ ಬಾರಿಗೂ ಈ ಬಾರಿಯ ಫಲಿತಾಂಶವನ್ನು ಹೋಲಿಸಿ ನೋಡಿದರೆ ಸರ್ಕಾರವನ್ನು ದೂಷಿಸುವ ಅಗತ್ಯವಿಲ್ಲ. ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನ ಭಾರತದ ಆಟಗಾರರಿಗೆ ಸಂಪೂರ್ಣ ಬೆಂಬಲ ನೀಡಿದ ಕ್ರೀಡಾ ಸಚಿವಾಲಯ ತನ್ನ ಕೆಲಸವನ್ನು ಮಾಡಿದೆ. ನಾವು ಬ್ಯಾಡ್ಮಿಂಟನ್​ನಲ್ಲಿ ಮೂರು ಪದಕಗಳನ್ನು ನಿರೀಕ್ಷಿಸಿದ್ದೇವು. ಕನಿಷ್ಠ ಪಕ್ಷ ಒಂದು ಪದಕ ಗೆದ್ದಿದ್ದರೂ ನನಗೆ ಖುಷಿ ಕೊಡುತ್ತಿತ್ತು. ನಾನು ವೈಯಕ್ತಿಕವಾಗಿ ನಿರಾಸೆಯಾಗಿದೆ. ಸರ್ಕಾರ, ಕ್ರೀಡಾ ಸಚಿವಾಲಯ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಯಾರಾದರೂ ಮಾಡಬಹುದೆಂದು ನಾನು ಭಾವಿಸುವುದಿಲ್ಲ. ಹೀಗಾಗಿ ಆಟಗಾರರು ಸ್ವಲ್ಪ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net