ಬಂಡೀಪುರ ಹೆಬ್ಬಾಗಿಲು ದಾಟುವ ಮುನ್ನವೇ ನಿಂತ ಐರಾವತ​! 2 ಕಿ.ಮೀ. ರಸ್ತೆಯುದ್ದಕ್ಕೂ ಟೆನ್ಷನ್​

bandipura bus
Published on

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶ ದ್ವಾರದ ಬಳಿ ಸುಮಾರು 2 ಕಿ.ಮೀ.ವರೆಗೂ ಟ್ರಾಫಿಕ್​ ಉಂಟಾಗಿತ್ತು. ಎರಡ್ಮೂರು ತಾಸು ವಾಹನಗಳು ಹಿಂದಕ್ಕೂ ಹೋಗಲಾಗದೆ, ಮುಂದಕ್ಕೂ ಹೋಗಲಾಗದೆ ರಸ್ತೆಯಲ್ಲೇ ನಿಂತಿದ್ದವು.

ತಾಲೂಕಿನ ಮೇಲುಕಾಮನಹಳ್ಳಿ ರಸ್ತೆಯಲ್ಲಿ ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಬೆಂಗಳೂರಿನಿಂದ ಊಟಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ (ಐರಾವತ) ತಳಭಾಗಕ್ಕೆ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಚಲಿಸಲು ಸಾಧ್ಯವಾಗದೆ ಸ್ಥಳದಲ್ಲೇ ನಿಂತಿತ್ತು.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿ-ಕೆಕ್ಕನಹಳ್ಳ ಮಾರ್ಗದಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಅನುಮತಿ ಇಲ್ಲ. ಈ ಅವಧಿಯಲ್ಲಿ ರಸ್ತೆಗೆ ಗೇಟ್ ಮುಚ್ಚಿ ಬಂದ್ ಮಾಡಲಾಗುತ್ತದೆ. ಆದರೆ, ಅಂತರರಾಜ್ಯ ಓಡಾಟ ನಡೆಸಲು 3 ಕೆಎಸ್​ಆರ್​ಟಿಸಿ ಬಸ್​ಗಳಿಗೆ ಮಾತ್ರ ಸಂಚರಿಸಲು ವಿಶೇಷ ಅನುಮತಿ ಇದೆ. ಶುಕ್ರವಾರ ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಊಟಿಗೆ ತೆರಳುತ್ತಿದ್ದ ಐರಾವತ ಬಸ್​ಗೆ ಗೇಟ್ ತೆರೆಯಲು ಮತ್ತು ಮುಚ್ಚಲು ಅಳವಡಿಸಿದ್ದ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಸಾಗಲು ಸಾಧ್ಯವಾಗಿಲ್ಲ.

ಇದರಿಂದಾಗಿ ಬೆಳಗ್ಗೆ 6 ಗಂಟೆ ಬಳಿಕ ಬಂದ ಬೇರೆ ವಾಹನಗಳು ರಸ್ತೆಯಲ್ಲಿ ಸಾಗಲು ಸ್ಥಳಾವಕಾಶವಿಲ್ಲದೆ ಸುಮಾರು 2 ಕಿ.ಮೀ. ಸಂಚಾರ ದಟ್ಟಣೆ ಉಂಟಾಯಿತು. ಬಂಡೀಪುರ ಸಫಾರಿ ವಾಹನಗಳಿಗೆ ಕಾಡಿನೊಳಗೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಲಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಹೈವೆ ಪೆಟ್ರೋಲ್ ಪೊಲೀಸರು ಆಗಮಿಸಿದರು. ಕ್ರೇನ್ ಸಹಾಯದಿಂದ ಐರಾವತ ಬಸ್ ಅನ್ನು ಮೇಲೆತ್ತಿ ಪೊಲೀಸ್ ಸಿಬ್ಬಂದಿ ಕಬ್ಬಿಣದ ಪಟ್ಟಿ ಬಿಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಾಡಿನ ರಸ್ತೆಯಲ್ಲಿ ಸಿಲುಕಿದ್ದ ಭಯಗೊಂಡಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net