ದಸರಾದಂತೆ ವಿಜೃಂಭಿಸಲಿದೆ ಬೆಂಗಳೂರು ಬಂಡಿದೇವರ ಉತ್ಸವ: IRS ಅಧಿಕಾರಿ ಜಯರಾಮ್‌ ರಾಯಪುರ

dk - 2025-06-25T185858.209
Published on

ಬೆಂಗಳೂರು: ಕೆಂಪೇಗೌಡರ ಕಾಲದ ಬಂಡಿದೇವರ ಉತ್ಸವದ ಆಚರಣೆ ಇಂದಿನ ಜನರಿಗೆ ತಿಳಿಯುವಂತಾಗಬೇಕು. ದಸರಾ ಉತ್ಸವದಂತೆ ಬಂಡಿದೇವರ ಉತ್ಸವವು ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಹಿರಿಯ IRS ಅಧಿಕಾರಿ ಹಾಗೂ ಸಮಿತಿಯ ಗೌರವಾಧ್ಯಕ್ಷ ಜಯರಾಮ್‌ ರಾಯಪುರ ಹೇಳಿದರು.

ಮೂರು ದಿನಗಳ ಕಾಲ ನಡೆಯಲಿರುವ ʼಬೆಂಗಳೂರು ಬಂಡಿದೇವರ ಉತ್ಸವʼಕ್ಕೆ ನಗರದ ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ಇಂದು ಸಿಹಿ ತಯಾರಿಸುವ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.

ಕೆಂಪೇಗೌಡರು ತಮ್ಮ ಜನಾಂಗದವರಿಗಾಗಿ ಬಂಡಿದೇವರ ಉತ್ಸವವನ್ನು ಆಚರಿಸುತ್ತಿದ್ದರು. ಹಾಗೆಯೇ ಯಲಹಂಕ ಭಾಗದವರಿಗೆ ಸಂಬಂಧಪಟ್ಟಂತೆ ಉಯ್ಯಾಲೆ ಉತ್ಸವವನ್ನು ಆಚರಿಸುತ್ತಿದ್ದರು. ಆದ್ರೆ ಈ ಆಚರಣೆಗಳು, ವಿಚಾರಗಳು ಇಂದಿನ ಜನರಿಗೆ ಗೊತ್ತಿಲ್ಲ. ಮತ್ತೆ ಆ ಆಚರಣೆಗಳು ನಡೆಯಬೇಕು. ನಮ್ಮ ಬೇರು ಇನ್ನಷ್ಟು ಗಟ್ಟಿಯಾಗಬೇಕು, ಜಾತ್ಯಾತೀತ, ಸಾಂಸ್ಕೃತಿಕ ಆಚರಣೆಗಳು ಜನರನ್ನು ಬೆಸೆಯಬೇಕು ಎಂದು ಜಯರಾಮ್‌ ತಿಳಿಸಿದರು.

ನಾಡಪ್ರಭು ಕೆಂಪೇಗೌಡರ ಪೂರ್ವಿಕ ದೇವರಾದ ಕೆಂಪಣ್ಣಸ್ವಾಮಿ ಹಾಗೂ ಶ್ರೀವೀರಣ್ಣಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಬಳಿಕ ಒಕ್ಕಲಿಗ ಸಮುದಾಯದ 200ಕ್ಕೂ ಹೆಚ್ಚು ಮಹಿಳೆಯರೆಲ್ಲರೂ ಸೇರಿ ಸಿಹಿ ತಯಾರಿಸಿ ರಾಶಿ ಹಾಕಿದರು. ಇದನ್ನು ರಾಶಿ ಪೂಜೆ ಎಂದೂ ಕೂಡ ಕರೆಯಲಾಗುತ್ತದೆ. ನಂತರ ಅದನ್ನು ಪೊಟ್ಟಣದಲ್ಲಿ ತುಂಬಿಸಿ ದೇವರಿಗೆ ನೈವೇದ್ಯ ಸಲ್ಲಿಸಲಾಗಿದೆ. ಈ ಸಿಹಿಯನ್ನು ನಾಳಿನ ಮೆರವಣಿಗೆಯಲ್ಲಿ ಎಲ್ಲರಿಗೂ ಹಂಚಲಾಗುವುದು ಎಂದು ಮಾಹಿತಿ ನೀಡಿದರು.

ಬಂಡಿದೇವರ ಉತ್ಸವ ಸಮಿತಿಯ ಅಧ್ಯಕ್ಷ ಡಾ. ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಇದೊಂದು ನಮ್ಮ ಸಂಸ್ಕೃತಿಯ ಆಚರಣೆ. ಈ ಮೂಲಕ ಎಲ್ಲರೊಂದಿಗೆ ಬೆರೆಯುವುದು ಜೊತೆಗೆ ನಮ್ಮ ಆಚರಣೆಗಳು, ವಿಚಾರಗಳನ್ನು ಹಂಚಿಕೊಳ್ಳುವುದೇ ನಮ್ಮ ಆಶಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ದೂರಿಯಾಗಿ ನಡೆಯಲಿದೆ. ಆ ಸಂಭ್ರಮವು ಇಡೀ ನಾಡಿಗೆ ಸಾರಲಿದೆ ಎಂದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಕಾರ್ಯದರ್ಶಿ ಎಂ. ಅಮರೇಶ್‌, ಸಮಿತಿಯ ಉಪಾಧ್ಯಕ್ಷ ನಾಗರಾಜ್‌ (ನಿವೃತ್ತ ಎಸ್‌ಪಿ), ಹಿರಿಯ ಉಪಾಧ್ಯಕ್ಷ ಗೋವಿಂದೇಗೌಡರು, ಕೆಂಪೇಗೌಡ ಸಂಶೋಧನಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜೆ. ನಾಗರಾಜ್‌, ಮುಖೇಶ್‌, ಪಾಂಡು ಕುಮಾರ್‌, ಉಮಾ ಬಸವರಾಜ್‌, ಭಾರತಿ ಜಯರಾಮ ಹಾಗೂ ಫಸ್ಟ್‌ ಸರ್ಕಲ್‌ ಸಂಘಟನೆಯವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net