

ಬಾಳೆಹೊನ್ನೂರು: ಎಲ್ಲ ಭಾರತೀಯರೂ ಸ್ವಾತಂತ್ರ್ಯದ ನಿಜವಾದ ಅರ್ಥ ಅರಿತು, ಜಾತಿ, ಮತ, ಪಂಥಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬೆಳೆಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಗುರುವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಬಹಳಷ್ಟು ಜನ ಪ್ರಾಣ ತ್ಯಾಗ ಮಾಡಿದ್ದನ್ನು ಮರೆಯಲಾಗದು. ಸ್ವಾತಂತ್ರೃ ನಂತರ ದೇಶ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ. ಯುವ ಜನರಲ್ಲಿ ರಾಷ್ಟ್ರಪ್ರಜ್ಞೆ, ದೇಶಾಭಿಮಾನ, ಶ್ರದ್ಧೆ ಬೆಳೆಸುವಂತಹ ಕೆಲಸ ಹಿಂದೆಂದಿಗಿಂತಲೂ ಇಂದು ಬಹಳ ಮುಖ್ಯವಾಗಿ ಆಗಬೆೇಕಿದೆ ಎಂದರು.
ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಭಾವೈಕ್ಯತೆಯ ಸಂಕೇತವಾಗಿದ್ದು, ಅಶೋಕ ಚಕ್ರ ಅಹಿಂಸಾ ಶ್ರೇಷ್ಠತೆ ತೋರುತ್ತಿದೆ. ದೇಶದ ಭದ್ರತೆ, ಹಿತದೃಷ್ಟಿಯಿಂದ ರಾಷ್ಟ್ರದ ಎಲ್ಲ ಜನತೆ ಒಂದಾಗಿ ಒಗ್ಗಟ್ಟಾಗಿ ಶ್ರಮಿಸಬೇಕು. ವೈಯಕ್ತಿಕ ಹಿತಾಸಕ್ತಿಗಾಗಿ ದೇಶದ ಭದ್ರತೆಗೆ ಧಕ್ಕೆಯಾಗಬಾರದು ಎಂದು ಹೇಳಿದರು. ಹುಡಗಿ ಹಿರೇಮಠದ ಶ್ರೀ, ಕಡೇನಂದಿಹಳ್ಳಿ ದುಗ್ಲಿ ಹಿರೇಮಠದ ಶ್ರೀ ಪಾಲ್ಗೊಂಡಿದ್ದರು. ಬಿ.ಕಣಬೂರು ಗ್ರಾಪಂ ಸದಸ್ಯ ಎಂ.ಜೆ.ಮಹೇಶ್ ಆಚಾರ್ಯ, ಬಿ.ಜಗದೀಶ್ಚಂದ್ರ, ಮುಖ್ಯಶಿಕ್ಷಕಿ ಸುಜಾತಾ ಅಳವಂಡಿ, ಶಿಕ್ಷಕರಾದ ವೀರೇಶ ಕುಲಕರ್ಣಿ, ಕಟ್ಟೇಗೌಡ ಇತರರಿದ್ದರು.