ನಾವು ಬದಲಾದರೆ ಜಗತ್ತಿನ ಪರಿವರ್ತನೆ ಸಾಧ್ಯ

bhr seminar (1)
ಬಾಳೆಹೊನ್ನೂರಿನ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಏರ್ಪಡಿಸಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಪಟ್ಟಣದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಎಂ.ಆರ್.ಮಂಜುನಾಥ್, ಎಚ್.ಬಿ.ರಾಜಗೋಪಾಲ್, ಎಂ.ಡಿ.ಶಿವರಾಮ್, ರಾಜೇಂದ್ರ ಭಟ್, ನಟೇಶ್ ಇದ್ದರು.
Published on

ಬಾಳೆಹೊನ್ನೂರು: ನಾವು ಜೀವನದಲ್ಲಿ ಬೇರೆಯವರನ್ನು ಬದಲಾವಣೆ ಮಾಡುವುದಕ್ಕಿಂತ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು. ಆಗ ಮಾತ್ರ ಜಗತ್ತನ್ನು ಬದಲಾವಣೆ ಮಾಡಲು ಸಾಧ್ಯ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಬಾಳೆಹೊನ್ನೂರು ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಭಾನುವಾರ ಏರ್ಪಡಿಸಿದ್ದ ಲಯನ್ಸ್ ಜಿಲ್ಲೆ 317ರ ಸಂಧ್ಯಾ ಸಿರಿ ಪ್ರಾಂತೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನಮ್ಮ ಜೀವನ ಸೃಷ್ಟಿಯಾಗಿರುವುದೇ ಜಗತ್ತಿನಲ್ಲಿ ಸೇವೆ ಮಾಡಲು ಎಂದು ಅರಿತುಕೊಳ್ಳಬೇಕು. ಸೇವೆಯೇ ಸಮಾಜದ ಭಾಗವಾಗಿದ್ದು ನಾನು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸಬೇಕು ಎಂಬುದು ಅಂತಾರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್‌ನ ತತ್ವವಾಗಿದೆ ಎಂದರು.
ಸಮಾಜಕ್ಕಾಗಿ ನೀವು ನೀಡುವ ಹಣ ನಿಮಗೆ ಬಡ್ಡಿ ಸಮೇತವಾಗಿ ಯಾವುದೋ ರೂಪದಲ್ಲಿ ಬರುತ್ತದೆ. ಸಮಾಜದಲ್ಲಿ ಬದಲಾವಣೆ, ಪರಿವರ್ತನೆ ತರುವುದೇ ಲಯನ್ಸ್ ಸಂಸ್ಥೆಯಾಗಿದೆ ಎಂದು ಹೇಳಿದರು.
ಪ್ರಾಧ್ಯಾಪಕ ಶಿವಮೊಗ್ಗ ನಟೇಶ್ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು ನಿಸ್ವಾರ್ಥ ಸೇವೆ ಸಲ್ಲಿಸಬೇಕು. ತೋರಿಕೆ, ಆಡಂಬರಕ್ಕಾಗಿ ಯಾವುದೇ ಸೇವೆ ಮಾಡಬಾರದು ಎಂದರು.
ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜುನಾಥ್ ಮಾತನಾಡಿ, ಲಯನ್ಸ್ ಸಂಸ್ಥೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಸೇವೆಯೇ ನಮ್ಮ ಸಂಸ್ಥೆಯ ಗುರಿಯಾಗಿದೆ. ಸೇವೆಯೊಂದಿಗೆ ಸಾಂಗತ್ಯ ಇರಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಪೌರ ಕಾರ್ಮಿಕರಾದ ಅಣ್ಣಪ್ಪ, ಮುನಿಸ್ವಾಮಿ, ಮೈಲಾರಿ, ಸಂದೇಶ್, ಧರ್ಮಣ್ಣ ಹಾಗೂ ಪಾರ್ವತಿ, ಅತ್ಯುನ್ನತ ಶ್ರೇಣಿಯಲ್ಲಿ ಎಂಬಿಬಿಎಸ್ ಪದವಿ ಪೂರೈಸಿರುವ ನಿಧಿ ಕೆ.ಅಡ್ಡೋಣಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಕಾರ್ಯದರ್ಶಿ ವಿಲಿಯಂ, ವಲಯ ಅಧ್ಯಕ್ಷ ಎನ್.ಸುಬ್ರಹ್ಮಣ್ಯ, ಪ್ರಮುಖರಾದ ಎಚ್.ಬಿ.ರಾಜಗೋಪಾಲ್, ಪ್ರಪುಲ್ಲಾ ಮಂಜುನಾಥ್, ಎಂ.ವಿ.ಶ್ರೀನಿವಾಸಗೌಡ, ಎಂ.ನಾರಾಯಣ್ ಮೇಲ್ಪಾಲ್, ಕೆ.ನಾರಾಯಣಶೆಟ್ಟಿ, ಪಿ.ಸಿಜು, ಜಿ.ಎಂ.ಲಕ್ಷ್ಮಣಗೌಡ, ಬಿ.ಅಮೃತ್, ಕುಶಾಲ್ ಪಿ.ಹರನ್, ಸುರೇಂದ್ರ ಮಾಸ್ತರ್, ಮಂಜುನಾಥ್ ತುಪ್ಪೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net