ಮಾರುಕಟ್ಟೆ ಅಪಾಯವನ್ನು ಬ್ಯಾಲೆನ್ಸ್​ ಮಾಡಿ ಪ್ರತಿಫಲ ಪಡೆಯುವಲ್ಲಿ ಆಸ್ತಿ ಹಂಚಿಕೆ ಏಕೆ ಮುಖ್ಯ? Asset Allocation

Asset Allocation
Published on

Asset Allocation : ಇತ್ತೀಚೆಗೆ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆಸ್ತಿ ವರ್ಗಗಳನ್ನು ಅತಿಯಾಗಿ ಅವಲಂಬಿಸುತ್ತಿದ್ದಾರೆ. ಈ ಮೂಲಕ ಪಕ್ಷಪಾತದ ಬಲೆಗೆ ಬಿದ್ದು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಹೇಗೆಂದರೆ, ಒಂದೇ ವರ್ಗಕ್ಕೆ ಅಂಟಿಕೊಂಡಾಗ ಪೋರ್ಟ್ಫೋಲಿಯೊಗಳ ಮೌಲ್ಯಮಾಪನವು ಹಠಾತ್ ಕುಸಿತವನ್ನು ಎದುರಿಸಿದಾಗ, ಅದರ ಪರಿಣಾಮಗಳನ್ನು ನಿಭಾಯಿಸಲು ಹೂಡಿಕೆದಾರರಿಗೆ ತುಂಬಾ ಕಷ್ಟವಾಗುತ್ತದೆ. ಇದರಿಂದ ಗುರಿ-ಕೇಂದ್ರಿತ ಹಣಕಾಸು ಯೋಜನೆಯ ಒಟ್ಟಾರೆ ಉದ್ದೇಶವೇ ವಿಫಲವಾಗುತ್ತದೆ.

| ದೇವರಾಜ್​ ಪುಂಡಿ ರಾಮಪ್ಪ, ಎಎಂಎಫ್​ಐ ನೋಂದಾಯಿತ ಮ್ಯೂಚುವಲ್ ಫಂಡ್ ವಿತರಕರು

ಈ ಅಪಾಯವನ್ನು ತಪ್ಪಿಸಲು, ವಿವಿಧ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ ಹೂಡಿಕೆ ತಂತ್ರವನ್ನು ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯ. ಇದನ್ನು ಸ್ಮಾರ್ಟ್​ ಹೂಡಿಕೆ ಅಥವಾ ಹೂಡಿಕೆಯ ಬುದ್ಧಿವಂತಿಕೆ ಎನ್ನುತ್ತಾರೆ. ಈ ವಿಚಾರದಲ್ಲಿ ಆಸ್ತಿ ಹಂಚಿಕೆಯು ಒಂದು ಸ್ಮಾರ್ಟ್​ ಹೂಡಿಕೆಯ ತಂತ್ರವಾಗಿದೆ. ಇದು ಆದಾಯದಲ್ಲಿ ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆಗಳನ್ನು ಹಂಚುವ ಮೂಲಕ, ಒಂದರಲ್ಲಿ ನಷ್ಟವಾದರೂ ಇನ್ನಿತರ ವರ್ಗಗಳಲ್ಲಿ ಅದನ್ನು ಸರಿದೂಗಿಸಬಹುದು. ಇದರಿಂದ ನಿಮ್ಮ ಪೋರ್ಟ್ಫೋಲಿಯೊಗಳನ್ನು ಸ್ಥಿರ ಬೆಳವಣಿಗೆಯ ಹಾದಿಯಲ್ಲಿಡಬಹುದು. ಈ ಒಂದು ವಿಧಾನವು "ನಿಮ್ಮ ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ" ಎಂಬ ಮಾತಿಗೆ ಹೊಂದಿಕೊಳ್ಳುತ್ತೆ. ಒಂದು ವೇಳೆ ಒಂದೇ ಕಡೆ ಇಟ್ಟಾಗ ಬುಟ್ಟಿ ಏನಾದರೂ ಕುಸಿದರೆ, ಎಲ್ಲ ಮೊಟ್ಟೆಗಳು ಒಡೆದು ಹೋಗುತ್ತವೆ. ಅದರ ಬದಲು ಬೇರೆ ಬೇರೆ ಇಟ್ಟಾಗ ಒಂದು ಮೊಟ್ಟೆ ಒಡೆದರೂ ಉಳಿದ ಮೊಟ್ಟೆಗಳ ಸೇಫ್​ ಆಗಿ ಇರುತ್ತವೆ. ಅದೇ ರೀತಿ, ನಿಮ್ಮ ಬಂಡವಾಳವನ್ನು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದಾಗ ಒಂದೇ ಭಾರಿ ಕುಸಿಯುವ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿವಿಧ ವರ್ಗಗಳಲ್ಲಿ ಆಸ್ತಿ ಹಂಚಿಕೆ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ, ಹೂಡಿಕೆದಾರರು ತಮ್ಮ ಸಂಪತ್ತಿಗೆ ಹೆಚ್ಚು ಸ್ಥಿರ ಮತ್ತು ಸುಸ್ಥಿರ ಪಥವನ್ನು ನೀಡಬಹುದು. ಮಾರುಕಟ್ಟೆಯ ಚಂಚಲತೆಯ ಪ್ರಭಾವವನ್ನು ಆದಷ್ಟು ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಬಹುದು. ಆದರೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಆಸ್ತಿ ವರ್ಗವನ್ನು ಬೆನ್ನಟ್ಟುವುದು ಸರಿಯಾದ ಮಾರ್ಗವಲ್ಲ, ಒಂದೇ ಭಾರಿ ಕುಸಿಯುವ ಸಾಧ್ಯತೆ ಇದೆ.

ಸಂತೋಷ, ಶಾಂತಿಯುತ ಮತ್ತು ಒತ್ತಡ-ಮುಕ್ತ ಹೂಡಿಕೆ ಅನುಭವವು ಹೂಡಿಕೆದಾರರನ್ನು ಯಶಸ್ವಿಗೊಳಿಸುತ್ತದೆ. ಆಸ್ತಿ ಹಂಚಿಕೆಯ ತಂತ್ರವು ಆಸ್ತಿ ವರ್ಗಗಳಾದ ಈಕ್ವಿಟಿ, ಸಾಲ, ಚಿನ್ನ ಮತ್ತು ರಿಯಲ್ ಎಸ್ಟೇಟ್‌ಗಳಲ್ಲಿ ಸೂಕ್ತವಾದ ನಿಧಿಗಳ ಹಂಚಿಕೆಯ ಮೂಲಕ ಸ್ಥಿರ ಆದಾಯವನ್ನು ನೀಡುತ್ತದೆ. ಈಕ್ವಿಟಿಯು ಬೆಳವಣಿಗೆಯ ಅಂಶವನ್ನು ತಂದರೆ, ಸಾಲವು ಬಂಡವಾಳಕ್ಕೆ ಸ್ಥಿರತೆಯನ್ನು ನೀಡುತ್ತದೆ. ಮತ್ತೊಂದೆಡೆ, ಚಿನ್ನವು ಹಣದುಬ್ಬರದ ವಿರುದ್ಧ ಬಲವಾದ ಹೆಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಿಯಲ್ ಎಸ್ಟೇಟ್ ಸಾಧನಗಳು ಇಳುವರಿಯನ್ನು ಹೆಚ್ಚಿಸುತ್ತವೆ. ವಾಸ್ತವವಾಗಿ, ಆಸ್ತಿ ಹಂಚಿಕೆಯು ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅಗತ್ಯವಾದ ಎಲ್ಲ ಪ್ರಮುಖ ಹೂಡಿಕೆ ಮೂಲಭೂತ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಹೂಡಿಕೆಯನ್ನು ನಿಜವಾಗಿಯೂ ಫಲಪ್ರದವಾಗಿಸಲು ಉತ್ತಮ ಆಯ್ಕೆಯಾಗಿದೆ.

ನಿಮ್ಮ ಆಸ್ತಿ ಹಂಚಿಕೆಯನ್ನು ಸಾಧಿಸಲು ಅತ್ಯಂತ ಬುದ್ಧಿವಂತ ಮತ್ತು ಸುಲಭವಾದ ಮಾರ್ಗವೆಂದರೆ ಅದು ಮ್ಯೂಚುವಲ್ ಫಂಡ್‌ಗಳು. ಆಸ್ತಿ ಹಂಚಿಕೆ ಮಾಡಲು ಬಯಸುವ ಹೂಡಿಕೆದಾರರು ICICI ಪ್ರುಡೆನ್ಶಿಯಲ್ ಆಸ್ತಿ ಹಂಚಿಕೆ ನಿಧಿ (FOF) ಅನ್ನು ಪರಿಗಣಿಸಬಹುದು. ಈ ನಿಧಿಯು ಆಂತರಿಕ ಮೌಲ್ಯಮಾಪನ ಮಾದರಿಯನ್ನು ಬಳಸಿಕೊಂಡು ಈಕ್ವಿಟಿ, ಸಾಲ ಮತ್ತು ಚಿನ್ನದ ಮ್ಯೂಚುಯಲ್ ಫಂಡ್ ಯೋಜನೆಗಳು/ಇಟಿಎಫ್‌ಗಳಲ್ಲಿ ಹಂಚಿಕೆಗಳನ್ನು ಕ್ರಿಯಾತ್ಮಕವಾಗಿ ಸರಿಹೊಂದಿಸುತ್ತದೆ. 2025ರ ಜನವರಿ 31ರವರೆಗೆ ಈ ನಿಧಿಯು ಒಂದು ವರ್ಷದಲ್ಲಿ 11.90% ರಷ್ಟು ಲಾಭವನ್ನು ನೀಡಿದೆ, ಮೂರು ಮತ್ತು ಐದು ವರ್ಷಗಳಲ್ಲಿ ಕ್ರಮವಾಗಿ 12.92% ಮತ್ತು 13.87% CAGR ಆದಾಯವನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net