Mobile Addiction : ಪ್ರಸ್ತುತ ಜೀವನಶೈಲಿಯಲ್ಲಿ ಮೊಬೈಲ್ ಫೋನ್‌ಗಳು ಹಲವರಿಗೆ ಅವಿಭಾಜ್ಯ ಅಂಗವಾಗಿದೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್ ಬೇಕೇ ಬೇಕು. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್ ಕೈಯಲ್ಲಿ ಹಿಡಿದಿರಲೇ ಬೇಕು. ಮೊಬೈಲ್ ಇಲ್ಲದಿದ್ದರೆ ಕೈಕಾಲುಗಳೇ ಓಡುವುದಿಲ್ಲ, ಏನೋ ಕಳೆದುಕೊಂಡಂತೆ ಚಡಿಪಡಿಸುತ್ತೇವೆ ಎಂದು ಹೇಳುವ ಅನೇಕ ಮಂದಿ ಇದಾರೆ. ಅಂಗೈ ಗಾತ್ರದ ಒಂದು ಸಣ್ಣ ಮೊಬೈಲ್ ಇಂದು ಜಗತ್ತಿನ ನೆಮ್ಮದಿಯನ್ನೇ ನಾಶ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.
ಕೆಲವರು ತಮ್ಮ ಫೋನ್‌ಗಳನ್ನು ದಿಂಬಿನ ಕೆಳಗೆ ಅಥವಾ ಪಕ್ಕದಲ್ಲಿ ಇಟ್ಟುಕೊಂಡು ಮಲಗುತ್ತಾರೆ. ಈ ರೀತಿ ಮಾಡುವುದರಿಂದ ಅವರು ಯಾವ ಆರೋಗ್ಯ ಅಪಾಯಗಳನ್ನು ಎದುರಿಸುತ್ತಾರೆ ಎಂಬುದನ್ನು ತಿಳಿಯೋಣ. ಅನೇಕ ಜನರು ಫೋನ್‌ಗಳಿಂದ ಬರುವ ವಿಕಿರಣದ ಬಗ್ಗೆ ಭಯಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಲಾದ ಸಂದೇಶಗಳು ಈ ಭಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದರೆ, ವೈಜ್ಞಾನಿಕವಾಗಿ ಫೋನ್ನ ವಿಕಿರಣವು ಅಷ್ಟು ಅಪಾಯಕಾರಿ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ.
ಅಂದಹಾಗೆ ಫೋನ್‌ಗಳು ಕಡಿಮೆ ಶಕ್ತಿಯ ವಿಕಿರಣವನ್ನು ಹೊರಸೂಸುತ್ತವೆ. ಇದು ನಮ್ಮ ಜೀನ್‌ಗಳು ಅಥವಾ ಜೀವಕೋಶಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಪ್ರಕಾರ, ಫೋನ್ ವಿಕಿರಣವು ಮೆದುಳಿನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.
ಮೊಬೈಲ್ ಫೋನ್‌ಗಳ ಬಳಕೆಯು ಮೆದುಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ಕೆಲವು ಅಭಿಪ್ರಾಯಗಳು ಹರಿದಾಡುತ್ತಿವೆ. ಆದರೆ, ಕಳೆದ 20 ವರ್ಷಗಳಿಂದ ವೈರ್‌ಲೆಸ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದು, ಮೆದುಳಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಫೋನ್‌ನಿಂದ ಬರುವ ವಿಕಿರಣವು ಎಕ್ಸ್-ಕಿರಣಗಳಷ್ಟು ಶಕ್ತಿಯುತವಾಗಿಲ್ಲ. ಆದ್ದರಿಂದ, ಮೆದುಳಿನ ಕೋಶಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಅಪಾಯವಿಲ್ಲ.
ಆದರೆ, ಫೋನ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ದೇಹದ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ. ನೋಟಿಫಿಕೇಶನ್ ಶಬ್ದಗಳು ಮತ್ತು ಫೋನ್ ಬೆಳಕು ನಿದ್ರೆಗೆ ಅಡ್ಡಿಪಡಿಸುತ್ತದೆ ಮತ್ತು ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಇನ್ನು ಫೋನ್ ಅನ್ನು ದೀರ್ಘಕಾಲ ಬಳಸಿದರೆ, ಅದು ಬಿಸಿಯಾಗುತ್ತದೆ. ನೀವು ಅದನ್ನು ದಿಂಬಿನ ಕೆಳಗೆ ಇಟ್ಟರೆ, ಶಾಖ ಹೆಚ್ಚಾಗಿ, ಬೆಂಕಿ ತಗುಲುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮೊಬೈಲ್ ಅನ್ನು ದಿಂಬಿನ ಕೆಳಗೆ ಇಟ್ಟು ಮಲಗಬೇಡಿ. ವಿಶೇಷವಾಗಿ ಆರಾಮದಾಯಕ ನಿದ್ರೆಗಾಗಿ, ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿ ಇರಿಸಿ ಅಥವಾ ಮಲಗುವ ಮೊದಲು ದೂರವಿಡಿ. ಚಾರ್ಜ್ ಮಾಡಲು ಫೋನ್ ಅನ್ನು ಹಾಸಿಗೆಯ ಬಳಿ ಇಡಬೇಡಿ. ಮಲಗುವ ಮೊದಲು ಫೋನ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
ಒಟ್ಟಾರೆಯಾಗಿ, ಫೋನ್ ಅನ್ನು ನಿಮ್ಮ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದು ಕ್ಯಾನ್ಸರ್ ಉಂಟುಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಇದು ನಿದ್ರಾಹೀನತೆ, ಮಾನಸಿಕ ಒತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಫೋನ್ ಅನ್ನು ದೂರವಿಟ್ಟು ಸರಿಯಾದ ನಿದ್ರೆ ಪಡೆಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಪರೀತ ಬೆನ್ನು ನೋವು ಇದೆಯಾ? ಮಲಗುವಾಗ ನೀವಿದನ್ನು ಮಾಡಿದ್ರೆ ಸಾಕು ಉತ್ತಮ ಪರಿಹಾರ ಸಿಗುತ್ತೆ! Back Pain