9 ರಂದು ಬಹುಜನರ ಸಂಕಲ್ಪ ದಿನ

Published on

ಅರಕಲಗೂಡು : ಬಹುಜನ ಸಮಾಜ ಪಕ್ಷದ (ಬಿಎಸ್ ಪಿ) ಸಂಸ್ಥಾಪಕ ಕಾನ್ಸಿರಾಂ ಪರಿನಿಬ್ಬಾಣ ದಿನದ ಪ್ರಯುಕ್ತ ಅ. 9ರಂದು ಬಹುಜನರ ಸಂಕಲ್ಪ ದಿನ ಮೈಸೂರು ವಲಯ ಮಟ್ಟದ ಸಮಾವೇಶವನ್ನು ಪಟ್ಟಣದಲ್ಲಿ ಹಮ್ಮಿಕೊಂಡಿರುವುದಾಗಿ ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ಅತ್ನಿ ಹರೀಶ್ ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 43 ಸಾವಿರ ಕಿ.ಮೀ. ಸೈಕಲ್ ಪ್ರವಾಸ ನಡೆಸಿ, ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಎಸ್ ಪಿ ಅಧಿಕಾರಕ್ಕೆ ಬರುವಂತೆ ಮಾಡಿದ್ದಲ್ಲದೆ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಹೋರಾಟ ನಡೆಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಸಿಕೊಟ್ಟ ಧೀಮಂತ ನಾಯಕ ಕಾನ್ಸಿರಾಂ ಅವರನ್ನು ಸ್ಮರಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 8 ಜಿಲ್ಲೆಗಳ ಅಂಬೇಡ್ಕರ್ ಅನುಯಾಯಿಗಳು, ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಪಟ್ಟಣದ ಶಿಕ್ಷಕರ ಭವನದ ಮುಂಭಾಗದಲ್ಲಿ ನಡೆಯುವ ಸಮಾವೇಶದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ, ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್, ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್ ಕೀರ್ತಿ, ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ.ರಾಧಾಕೃಷ್ಣ, ಕಾಂತಪ್ಪ ಅಲಂಗಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸುವರು. ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.

ಮುಖಂಡರಾದ ಶಿವಣ್ಣ, ಪುಟ್ಟರಾಜ್, ಶಾಹಿದ್ ಪಾಷ, ಮನು, ಆದರ್ಶ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net