

ಬೆಂಗಳೂರು: ತಲತಲಾಂತರದಿಂದ ಉಳುಮೆ ಮಾಡುತ್ತಿರುವ ಬಗರ್ಹುಕುಂ ಸಾಗುವಳಿ ಭೂಮಿ ಸಕ್ರಮಗೊಳ್ಳುವ ಕನಸಿನಲ್ಲೇ ಬದುಕು ದೂಡುತ್ತಿರುವ ರಾಜ್ಯದ ಬಡ ಅನ್ನದಾತರಿಗೆ ಬರಸಿಡಿಲು ಎದುರಾಗಿದೆ. ತಹಸೀಲ್ದಾರ್ಗಳ ಹುಕುಂನಿಂದಾಗಿ ರೈತರು ರಾತ್ರಿ ಬೆಳಗಾಗುವಷ್ಟರಲ್ಲಿ ಭೂ ರಹಿತರಾಗುವ ಆತಂಕಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಬಗರ್ ಹುಕುಂ ಅರ್ಜಿಗಳ ತ್ವರಿತ ವಿಲೇವಾರಿ ಪ್ರಕ್ರಿಯೆ ಆರಂಭವಾಗಿದೆ. ಅಧಿಕೃತ ಸಾಗುವಳಿ ಚೀಟಿಯಿಲ್ಲದ ಅನ್ನದಾತರ ಅತಂತ್ರ ಸ್ಥಿತಿಗೆ ಒಂದು ವರ್ಷದ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿತ್ತು. ಇದರಿಂದಾಗಿ ತಲೆಮಾರುಗಳಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಉಳುಮೆ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದ ರೈತರಲ್ಲಿ ಶಾಶ್ವತ ಪರಿಹಾರದ ಆಶಾಕಿರಣ ಗೋಚರಿಸಿತ್ತು. ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ 1 ವರ್ಷ ಅವಕಾಶ ನೀಡಲು ಕಾರಣವಿತ್ತು. ನಮೂನೆ 50, 53 ಮತ್ತು 57ರಡಿ ಸ್ವೀಕರಿಸಿರುವ ಅರ್ಜಿಗಳ ಪೈಕಿ ಸಾಕಷ್ಟು ವಿಲೇವಾರಿಯಾಗದೆ ತಾಲೂಕು ಹಂತದ ಬಗರ್ ಹುಕುಂ ಸಮಿತಿಗಳ ಮುಂದೆ ಬಾಕಿಯಿವೆ. ಇದರಲ್ಲಿ ಅರ್ಹವಿಲ್ಲದ ಅರ್ಜಿಗಳೂ ಸೇರಿಕೊಂಡಿವೆ. ಪರಿಣಾಮ ಸರಿಯಾಗಿ ಒತ್ತುವರಿ ತೆರವು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಸಮಿತಿಗಳು ಅರ್ಜಿಗಳನ್ನು ಇತ್ಯರ್ಥ ಮಾಡದಿರುವುದನ್ನು ನ್ಯಾಯಾಲಯ ಸಹ ಗಂಭೀರವಾಗಿ ಪರಿಗಣಿಸಿದೆ.
ಶಾಸಕರ ಸಮಿತಿ ಗೌಣ: ಬಗರ್ ಹುಕುಂ ಸಕ್ರಮೀಕರಣ ಬಯಸಿದ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯ ಅಕ್ರಮಸಕ್ರಮ ಸಮಿತಿ ದಾಖಲೆಗಳ ಪ್ರಕಾರ ಪರಿಶೀಲಿಸುತ್ತಿತ್ತು. ಇದೇ ಸಂದರ್ಭದಲ್ಲಿ ಏಳು ದಿನಗಳ ಮುಂಚೆ ನೋಟಿಸ್ ನೀಡಿ, ಸಮಿತಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಲು ಅವಕಾಶ ನೀಡುತ್ತಿತ್ತು. ದಾಖಲೆಗಳು ರೈತನ ಹೇಳಿಕೆಗೆ ತಾಳೆಯಾದರೆ ಮಂಜೂರು ಇಲ್ಲವೇ ತಿರಸ್ಕಾರ ಅಥವಾ ಹೆಚ್ಚಿನ ಮಾಹಿತಿ ಸಲ್ಲಿಸಲು ಸೂಚಿಸಿ ಬಾಕಿಯಿರಿಸುತ್ತಿತ್ತು. ಮೂರು ನಮೂನೆಯಡಿ ಸಲ್ಲಿಸಿದ ಅರ್ಜಿಗಳು ಒಮ್ಮೆ ತಿರಸ್ಕರಿಸಿದರೆ, ಅಕಸ್ಮಾತ್ ರೈತನಿಗೆ ಅನ್ಯಾಯವಾಗಿದ್ದರೂ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ತ್ವರಿತ ವಿಲೇವಾರಿ ಧಾವಂತದಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿಗಳನ್ನು ಸರ್ಕಾರ ಗೌಣವಾಗಿಸಿದೆ.
ಹೀಗಾಗಿ ಅರ್ಹ ಅರ್ಜಿಗಳು ಮಾತ್ರ ಮಂಜೂರಾತಿಗೆ ಸಮಿತಿ ಮುಂದೆ ಬರುತ್ತಿವೆ. ಇನ್ನೊಂದೆಡೆ ಅರ್ಜಿದಾರರ ಹೇಳಿಕೆ ಕೂಡ ಪಡೆಯದೇ ತಹಸೀಲ್ದಾರ್ ತಮ್ಮ ಹಂತದಲ್ಲೇ ಅರ್ಹ, ಅನರ್ಹವೆಂದು ನಿರ್ಧರಿಸಿ, ಅನರ್ಹ ಅರ್ಜಿ ತಿರಸ್ಕರಿಸಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡುತ್ತಿದ್ದಾರೆ.
ಶೇ.90 ಅರ್ಜಿ ತಿರಸ್ಕೃತ?: ಅಕ್ರಮ ಸಕ್ರಮಕ್ಕೆ ಸಲ್ಲಿಕೆಯಾದ ಒಟ್ಟು 14.22 ಲಕ್ಷ ಅರ್ಜಿಗಳ ಪೈಕಿ ಶೇ.90 ಅರ್ಜಿಗಳಿಗೆ ಕೊಕ್ ನೀಡುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಜಿಲ್ಲಾಧಿಕಾರಿಗಳು 3,83,502 ಅರ್ಜಿ ತಿರಸ್ಕರಿಸಿದ್ದಾರೆ. ತಹಸೀಲ್ದಾರರು ಜಿಲ್ಲಾಧಿಕಾರಿಗಳಿಗೆ ತಿರಸ್ಕರಿಸಲು ಪ್ರಸ್ತಾವನೆ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ 8,37,944. ಇವೆರಡೂ ಸೇರಿದರೆ 12 ಲಕ್ಷಗಳಾಗುತ್ತದೆ.
10ರಿಂದ ಹೋರಾಟ: ಬಗರ್ಹುಕುಂ ಸಾಗುವಳಿ ಅರ್ಜಿಗಳ ಶರವೇಗದ ವಿಲೇವಾರಿ ಹಿಂದೆ ಭೂಮಾಫಿಯಾ ಮೇಲಿನ ಸರ್ಕಾರದ ಒತ್ತಾಸೆ ಇರಬಹುದೆಂಬ ಆರೋಪ ಕೇಳಿಬಂದಿದೆ. ತಲತಲಾಂತರಗಳಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಹುನ್ನಾರ ಹೂಡಲಾಗಿದೆ ಎಂದು ಕೆಪಿಆರ್ಎಸ್ ಉಪಾಧ್ಯಕ್ಷ ಯು.ಬಸವರಾಜ ಆರೋಪಿಸಿದ್ದಾರೆ. ಅಧಿಕಾರಿಗಳ ಏಕಪಕ್ಷೀಯ ನಿರ್ಧಾರ, ಸರ್ಕಾರದ ನಿಲುವು ವಿರೋಧಿಸಿ ಫೆ.10ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟ ಧರಣಿ ಹೂಡಲು ತೀರ್ವನಿಸಿರುವುದಾಗಿ ಹೇಳಿದ್ದಾರೆ.
ತಲೆಕೆಳಗಾದ ಉದ್ದೇಶ: ಅರ್ಜಿ ವಿಲೇವಾರಿ ವಿಳಂಬ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. 2-3 ದಶಕಗಳಿಂದ ಬಾಕಿಯಿರುವ ಅರ್ಜಿ ಇತ್ಯರ್ಥಪಡಿಸಿ, ಅರ್ಹರಿಗೆ ಅನುಕೂಲ ಮಾಡಿಕೊಡಬೇಕೆಂಬ ಸರ್ಕಾರದ ನೈಜ ಉದ್ದೇಶ ಅನುಷ್ಠಾನ ಹಂತದಲ್ಲಿ ತಲೆಕೆಳಗಾಗಿದೆ ಎಂಬ ದೂರುಗಳಿವೆ.
ಕಣ್ಮುಚ್ಚಿಕೊಂಡು ಅಸ್ತು: ಕಂದಾಯ ಭೂಕಾಯ್ದೆ 1964, ನಿಯಮ 108ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಲು ಜಿಲ್ಲಾಧಿಕಾರಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ತಹಸೀಲ್ದಾರರು ಶಿಫಾರಸು ಮಾಡಿದ ತಿರಸ್ಕಾರ ಪ್ರಸ್ತಾವನೆಗಳಿಗೆ ಕಣ್ಮುಚ್ಚಿ ಅಸ್ತು ಎನ್ನುತ್ತಿರುವ ಆರೋಪಗಳಿವೆ. ಬೆಳಗಾವಿ ಜಿಲ್ಲೆಯ ಕೆಲವು ರೈತರು ದಶಕಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದರು. ಆದರೆ ತಹಸೀಲ್ದಾರ್ ‘ಗೋಮಾಳ ಎಂದು ನಮೂದಿಸಿ ತಿರಸ್ಕರಿಸಲು ಶಿಫಾರಸು ಮಾಡಿದ್ದರು. ಜಿಲ್ಲಾಧಿಕಾರಿ ಅಧಿಕೃತ ಮುದ್ರೆಯೊತ್ತಿದ್ದರು. ನಂತರ ನೊಂದ ರೈತರ ಒತ್ತಾಯಕ್ಕೆ ಕಟ್ಟುಬಿದ್ದು, ಸ್ಥಳ ಪರಿಶೀಲಿಸಿದಾಗ ಗೋಮಾಳವಲ್ಲ, ಸಾಗುವಳಿ ಜಮೀನು ಎಂಬುದು ದೃಢಪಟ್ಟಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ತಹಸೀಲ್ದಾರ್ ಕಣ್ತಪ್ಪಿನಿಂದ ಆಗಿದೆ ಎಂಬ ಒಪ್ಪಿಕೊಂಡು ಮರುಪ್ರಸ್ತಾವನೆ ಸಲ್ಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಇದೇ ಮಾದರಿ ಅವಾಂತರ ನಡೆಯುವ ಸಾಧ್ಯತೆಯಿತ್ತು. ಜಾಗೃತ ರೈತರ ಮನವಿ ಹಾಗೂ ಹಿರಿಯ ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ಅರ್ಹ ರೈತರು ಜಮೀನು ಕಳೆದುಕೊಳ್ಳುವುದು ತಪ್ಪಿತು ಎಂದು ಇಲಾಖೆ ಮೂಲಗಳು ವಿವರಿಸಿವೆ. ತ್ವರಿತವಾಗಿ ವಿಲೇವಾರಿ ಮಾಡುವ ಧಾವಂತದಲ್ಲಿ ತಹಸೀಲ್ದಾರ್ಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಕ್ಷೇತ್ರ ಕಾರ್ಯ, ಸಮೀಕ್ಷೆ ಮಾಡದೆ ‘ಅನುಕೂಲ’ಕರ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಿಂದೆಮುಂದೆ ನೋಡದೆ ಸಹಿ ಹಾಕಿ ಕೈತೊಳೆದುಕೊಳ್ಳುತ್ತಿರುವ ಗುಮಾನಿಯಿದೆ.
2023ರ ಸುತ್ತೋಲೆಯಲ್ಲಿ ಏನಿದೆ ?: ತಹಸೀಲ್ದಾರರು ಅರ್ಜಿ ಪರಿಶೀಲಿಸಿದ ನಂತರ ಅನರ್ಹ ಅರ್ಜಿಗಳನ್ನು ಭೂಕಂದಾಯ ನಿಯಮಗಳು 108ಸಿ, 108ಸಿಸಿ ಮತ್ತು 108ಸಿಸಿಸಿರಡಿ ವಿಲೇಗೊಳಿಸಲು ಸಲ್ಲಿಸತಕ್ಕದ್ದು. ಜತೆಗೆ ಅರ್ಹ ಅರ್ಜಿಗಳನ್ನು ಸಮಿತಿಯ ಮುಂದೆ ಮಂಡಿಸಲು ಕ್ರಮವಹಿಸತಕ್ಕದ್ದು. ಇದು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ಕುಮಾರ್ ಕಟಾರಿಯಾ 1-12-2023ರಂದು ಹೊರಡಿಸಿದ ಸುತ್ತೋಲೆಯಲ್ಲಿನ ಮಾರ್ಗಸೂಚಿ ಮುಖ್ಯಾಂಶ.
ಏನಿದು ಅರ್ಜಿ ನಮೂನೆ ?: ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿದಾರರು ಅಧಿಕೃತ ಸಾಗುವಳಿ ಚೀಟಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ನಿಗದಿಪಡಿಸಿದ ಅರ್ಜಿ ನಮೂನೆಗಳಿವು. 1990ರ ಪೂರ್ವ ಬಗರ್ ಹುಕುಂ ಸಾಗುವಳಿಗೆ ಫಾರಂ ನಂಬರ್ 50, 1998ರ ಪೂರ್ವ ಸಾಗುವಳಿಗೆ ಫಾರಂ ನಂಬರ್ 53 ಮತ್ತು 2005ರ ಪೂರ್ವ ಸಾಗುವಳಿಗೆ ಸಕ್ರಮ ಕೋರಿ ಫಾರಂ ನಂಬರ್ 57ರಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಸಿದ್ದರಾಮಯ್ಯ 1.0 ಸರ್ಕಾರದ ಅವಧಿಯಲ್ಲಿ 2017ರಲ್ಲಿ ಒಂದು ವರ್ಷದ ಅವಧಿಗೆ ಅರ್ಜಿ ಸ್ವೀಕಾರ ಹಾಗೂ ವಿಲೇವಾರಿ ಗಡುವು ನೀಡಲಾಗಿತ್ತು. 1998ರ ಅರ್ಜಿಗಳು 2022 ಕಳೆದರೂ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ 2.0 ಸರ್ಕಾರ ಪರಿಷ್ಕೃತ ಸುತ್ತೋಲೆ ಹೊರಡಿಸಿ ಇತ್ಯರ್ಥಕ್ಕೆ ಒಂದು ವರ್ಷದ ಕಾಲಮಿತಿ ವಿಧಿಸಿದೆ.
ಪಾರದರ್ಶಕ ಮತ್ತು ಅರ್ಹರಿಗೆ ನ್ಯಾಯ ನೀಡಲು ಸರ್ಕಾರ ಬದ್ಧವಾಗಿದೆ. ಅರ್ಜಿಗಳ ವಿಲೇವಾರಿಯಲ್ಲಿ ಲೋಪ ಇದ್ದರೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಬೇಕು. ಅವರೇ ಪರಿಶೀಲಿಸಿ ಕ್ರಮವಹಿಸುತ್ತಾರೆ. ಖುದ್ದಾಗಿ ನನಗೆ ಸಲ್ಲಿಸಿದರೂ ಕೂಡ ಅಧಿಕಾರಿಗಳಿಗೆ ಸೂಚಿಸುವೆ.
| ಕೃಷ್ಣಬೈರೇಗೌಡ ಕಂದಾಯ ಸಚಿವ
ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಶಾಸಕರ ಅಧ್ಯಕ್ಷತೆಯ ಸಮಿತಿಗಿದ್ದ ಅಧಿಕಾರ ಕಿತ್ತುಕೊಂಡು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ತಹಸೀಲ್ದಾರರು ಮಂಜೂರು ಶಿಫಾರಸಿಗಿಂತ ತಿರಸ್ಕಾರದ ಗುರಿಯಿಟ್ಟುಕೊಂಡಿದ್ದಾರೆ. ಅರ್ಜಿದಾರರ ಹೇಳಿಕೆಯನ್ನು ತಹಸೀಲ್ದಾರರು ದಾಖಲಿಸಿಕೊಳ್ಳದೆ ತಿರಸ್ಕರಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುತ್ತಿರುವುದು ಏಕಮುಖದ ನಿರ್ಧಾರ.
- ವಿ.ಸುನಿಲ್ಕುಮಾರ್, ಶಾಸಕ