ಇಂದು ಅವತಾರ ದಿನ; ಭಕ್ತರ ಪೊರೆವ ಬಾದಾಮಿ ಬನಶಂಕರಿ

Badami
Published on

ಭಾರತದಲ್ಲಿರುವ ಶಕ್ತಿಪೀಠಗಳಲ್ಲಿ ಬಾದಾಮಿ ಬನಶಂಕರಿದೇವಿ ದೇವಸ್ಥಾನವೂ ಒಂದು. ಹಿಂದೆ ಅಗಸ್ಱರು ಬನಶಂಕರಿಯನ್ನು ‘ಬನಸಿರಿದೇವಿ’ ಎಂದು ಕರೆದರು. ಬನ ಎಂದರೆ ಅರಣ್ಯ, ಸಿರಿ ಎಂದರೆ ಸಂಪತ್ತು. ಚಾಲುಕ್ಯರ ಕಾಲದಲ್ಲಿ ಈ ದೇವಿಯನ್ನು ಆರಾಧಿಸುತ್ತಿದ್ದರು ಹಾಗೂ ಬಾದಾಮಿಯನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡಿದ್ದರು.

ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ಬನದವ್ವ, ಬಂದವ್ವ, ವನಶಂಕರಿ, ನವದುರ್ಗೆ, ಶಾಕಾಂಬರಿ ಹೀಗೆ ನಾನಾ ಹೆಸರುಗಳಿಂದ ಪೂಜೆಗೊಳ್ಳುತ್ತಿರುವ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿದೇವಿಯು ಪಾರ್ವತಿದೇವಿಯ ಅವತಾರ ಎಂದೇ ಭಾವಿಸಲಾಗಿದೆ. ಬನಶಂಕರಿ ದೇವಿಯ ಅವತಾರ ದಿನ ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲ್ಪಡುತ್ತದೆ. ಈ ಬಾರಿ ಇದು ಮೇ 18ರಂದು ಬಂದಿದೆ. ಅಂದು ಸುಮಾರು 5 ಸಾವಿರ ಮಾವಿನ ಹಣ್ಣುಗಳ ರಸದಿಂದ ದೇವಿಗೆ ಅಭಿಷೇಕ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಕುಂಕುಮ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯ, ನಾನಾ ವಿಧದ ಪುಷ್ಪಗಳು, ಹಾಲು, ಸಕ್ಕರೆ, ತುಪ್ಪ, ಜೇನುತುಪ್ಪ, ಮೊಸರು, ಕಬ್ಬಿನಹಾಲು ಹೀಗೆ ಹದಿನಾರು ದ್ರವ್ಯಗಳಿಂದ ಶ್ರೀಸೂಕ್ತ ಮಂತ್ರಗಳ ಜತೆಗೆ ಅಭಿಷೇಕ ನಡೆಯುತ್ತದೆ. ಅಂದು 16 ಬಾರಿ ಶ್ರೀಸೂಕ್ತವನ್ನು ಪಠಿಸಲಾಗುತ್ತದೆ. ನಂತರ ಭಕ್ತರು ನೀಡಿದ ಸುಮಾರು 25 ರಿಂದ 35 ಸೀರೆಗಳನ್ನು ದೇವಿಗೆ ಒಂದೊಂದಾಗಿ ತೊಡಿಸಿ, ನಾನಾ ಆಭರಣಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಅಂದು ದೇವಿಗೆ ವಿಶೇಷವಾಗಿ ಹೋಳಿಗೆ ನೈವೇದ್ಯ ನಡೆಯುತ್ತದೆ. ಅಲ್ಲಿಗೆ ಆ ದಿನ ಬಂದ ಭಕ್ತರಿಗೆ ಮಾವಿನ ಹಣ್ಣಿನ ಸೀಕರಣೆ ಹಾಗೂ ಹೋಳಿಗೆಯನ್ನು ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ.

ಇಲ್ಲಿ ದೇವಿ ನೆಲೆಸಲು ಕಾರಣ

ಬನಶಂಕರಿ ದೇವಿಯು ಇಲ್ಲಿ ನೆಲೆಸಲು ಬಲವಾದ ಕಾರಣವಿದೆ. ಹಿಂದೆ ಈ ಪ್ರದೇಶದಲ್ಲಿ ಭೀಕರವಾದ ಬರ ಬಂದಿದ್ದರಿಂದ ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಆಹಾರವಿರಲಿಲ್ಲ. ಹಾಹಾಕಾರ ಮುಗಿಲು ಮುಟ್ಟಿತ್ತು. ದೇವಿಯನ್ನು ಕುರಿತು ದೇವತೆಗಳು ಮತ್ತು ಭಕ್ತರು ತಪಸ್ಸು, ಪ್ರಾರ್ಥನೆ ಮಾಡಿದರು. ಆಗ ಬನಶಂಕರಿ ದೇವಿ ಪ್ರತ್ಯಕ್ಷಳಾಗಿ ‘ತಾವು ಪ್ರಾರ್ಥಿಸಲು ಕಾರಣ ಏನು?’ ಎಂದು ಕೇಳಿದಾಗ ದೇವತೆಗಳು ‘ನಮಗೆ ನೀರು, ಅನ್ನ, ಆಹಾರ, ಧಾನ್ಯಗಳು ಇಲ್ಲದೆ ಯಜ್ಞಕಾರ್ಯಗಳು ನಿಂತಿವೆ. ಈ ಬರವನ್ನು ಹೋಗಲಾಡಿಸಿ ನಮ್ಮನ್ನು ರಕ್ಷಿಸು’ ಎಂದರು. ಆಗ ಬನಶಂಕರಿದೇವಿ ಪ್ರಸನ್ನಳಾಗಿ ತನ್ನ ಶರೀರದಿಂದಲೇ ಉತ್ಪನ್ನವಾದ ಶಾಖಗಳಿಂದ ಲೋಕವನ್ನು ಸಂರಕ್ಷಿಸಿ, ನೀರಿನ ದಾಹವನ್ನು ತಣಿಸಿದಳು. ಜಗತ್ತಿನ ಜೀವರಾಶಿಗಳ ಹಸಿವನ್ನು ನಿವಾರಿಸಿದಳು.

ಆ ಸಂದರ್ಭದಲ್ಲಿ ಅಲ್ಲಿ ಹರಿದ್ರಾ ತೀರ್ಥ, ತೈಲ ತೀರ್ಥ, ಕ್ಷಮಾ ತೀರ್ಥ, ಪದ್ಮ ತೀರ್ಥ ಹೀಗೆ ಅನೇಕ ತೀರ್ಥದ ಕೊಳಗಳನ್ನು ಸೃಷ್ಟಿಸಿದಳು. ಹರಿದ್ರಾ ತೀರ್ಥವು ಬನಶಂಕರಿ ದೇವಾಲಯದ ಎದುರಿನಲ್ಲಿಯೇ ಇದೆ. ಅತಿ ದೊಡ್ಡದಾಗಿದೆ. ಇದರ ಪ್ರದಕ್ಷಿಣೆ ಬರಲು 25 ನಿಮಿಷ ಬೇಕಾಗಬಹುದು. ಈಗಲೂ ಇದರಲ್ಲಿ ನಾವು ನೀರನ್ನು ಕಾಣಬಹುದು. ದೇವಾಲಯದ ಪಕ್ಕದಲ್ಲೇ ಪದ್ಮತೀರ್ಥ ಇದೆ. ಅಂದಿನಿಂದ ಇಂದಿನವರೆಗೂ ಈ ನೀರಿನಿಂದಲೇ ದಿನವೂ ದೇವಿಗೆ ಅಭಿಷೇಕ ನಡೆಯುತ್ತದೆ. ಬನಶಂಕರಿ ದೇವಿಯು ತನ್ನ ತನುವಿನಿಂದ ತರಕಾರಿ, ಗೆಡ್ಡೆಗೆಣಸುಗಳನ್ನು ಉತ್ಪತ್ತಿ ಮಾಡಿದಳು. ಈ ಕಾರಣದಿಂದಲೇ ಆಕೆಯನ್ನು ‘ಶಾಕಾಂಬರಿ’ ಎನ್ನುತ್ತಾರೆ. ಇಲ್ಲಿಗೆ ಬಂದ ಭಕ್ತರು ‘ಶಾಕಾಂಬರಿ ನಿನ್ನ ಪಾದಕ್ಕೆ ಶಂಭೂಕೊ’ ಎಂದು ಹೇಳಿ ನಮಸ್ಕರಿಸುತ್ತಾರೆ. ಅಂದರೆ ‘ನಿನ್ನ ಪಾದಕ್ಕೆ ನಾನು ಸರಿಸಾಟಿ ಯಾವತ್ತೂ ಆಗಲಾರೆ, ನಾನು ಯಾವಾಗಲೂ ನಿನ್ನ ಪಾದದಡಿಯಲ್ಲಿಯೇ ಇರತಕ್ಕವನು’ ಎಂದು ಅರ್ಥ.

ರೊಟ್ಟಿ ತಿನ್ನುವುದು ಮರೆಯಬೇಡಿ

ಬನಶಂಕರಿ ದೇವಾಲಯಕ್ಕೆ ಹೋದಾಗ ದೇವಾಲಯದ ಎದುರಿನಲ್ಲಿ ಕಾಣುವುದು ಅಲ್ಲಿನ ಕೆಲವರು ಬುಟ್ಟಿಯಲ್ಲಿ ತಂದಿರುವ ರೊಟ್ಟಿ ಹಾಗೂ ಪಲ್ಯ. ಇವರು ಬಾದಾಮಿ ಸಮೀಪ ಇರುವ ಚೊಳಚಗುಡ್ಡ, ಶಿರೂರು, ಬೇಲೂರು ಮುಂತಾದ ಅಕ್ಕಪಕ್ಕದ ಗ್ರಾಮಗಳಿಂದ ಪ್ರತಿ ದಿನ ಇಲ್ಲಿಗೆ ಬಂದು ರೊಟ್ಟಿ ಊಟ ಕೊಡುತ್ತಾರೆ. ಎರಡು ರೊಟ್ಟಿಗೆ 10 ರೂ.,ಜತೆಯಲ್ಲಿ ಮಜ್ಜಿಗೆಯೂ ಸಿಗುತ್ತದೆ. ರೊಟ್ಟಿಗೆ ಶೇಂಗಾ ಚಟ್ನಿ, ಸೌತೆಕಾಯಿ, ಈರುಳ್ಳಿ, ಕೆನೆ ಮೊಸರನ್ನು ಈ ತಾಯಂದಿರು ಪ್ರೀತಿಯಿಂದ ಬಡಿಸುತ್ತಾರೆ.

ಬನಶಂಕರಿ ದೇವಿಯ ವಿಗ್ರಹ

ಬನಶಂಕರಿ ದೇವಿಯ ವಿಗ್ರಹ ಸುಮಾರು 5 ಅಡಿ ಉದ್ದವಿದ್ದು, ಕಪ್ಪು ಶಿಲೆಯಲ್ಲಿ ಸುಂದರವಾದ ಸಿಂಹರೂಪಿಣಿಯಾಗಿ ದೇವಿ ನೆಲೆಸಿದ್ದಾಳೆ. 8 ಕೈಗಳನ್ನು ಹೊಂದಿದ್ದಾಳೆ. ಬಲಗೈಯಲ್ಲಿ ಖಡ್ಗ, ಗಂಟೆ, ತ್ರಿಶೂಲ ಮತ್ತು ಲಿಪಿ. ಎಡಗೈಯಲ್ಲಿ ಡಮರು, ಡೋಲು, ರುಂಡ ಹಾಗೂ ಅಮೃತ ಪಾತ್ರೆ ಇವೆ. ದೇವಿಯು ತ್ರಿನೇತ್ರವುಳ್ಳವಳು. ಇವಳನ್ನು ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಎಂದು ಕರೆಯುತ್ತಾರೆ. 5 ಸಾವಿರ ವರ್ಷಗಳಿಂದಲೂ ಯಾಜ್ಞವಲ್ಕ್ಯರ ಶಿಷ್ಕರಾದ ಕಣ್ವಋಷಿಗಳ ವಂಶಕ್ಕೆ ಸೇರಿದವರು ಇಲ್ಲಿನ ಪೂಜಾರಿಗಳು. ಇವರು ಕಣ್ವ ಶಾಖಾ ಬ್ರಾಹ್ಮಣರು. ಇದು ಒಂದು ಪಂಗಡ. ಅಂದಿನಿಂದ ಇಂದಿನವರೆಗೂ ಈ ವಂಶದವರೇ ದೇವಿಗೆ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ದೇವಿಯ ಪೂಜೆಯನ್ನು ಭಕ್ತರು ಗರ್ಭಗುಡಿಯಲ್ಲಿಯೇ ನಿಂತು ವೀಕ್ಷಿಸಬಹುದು. ಪ್ರತಿದಿನ ಅಭಿಷೇಕ, ನೈವೇದ್ಯ, ರಾತ್ರಿ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಹೀಗೆ ಅನೇಕ ಸೇವೆಗಳು ನಡೆಯುತ್ತವೆ. ಇಲ್ಲಿ ಪ್ರತಿ ವರ್ಷ ‘ಬನದ ಹುಣ್ಣಿಮೆ’ ಸಮಯದಲ್ಲಿ ಒಂದು ತಿಂಗಳು ಜಾತ್ರೆ ನಡೆಯುತ್ತದೆ. ಭಕ್ತರ ಕೈಯಿಂದಲೇ ಕುಂಕುಮಾರ್ಚನೆ ಮಾಡಿಸುವುದು ಇಲ್ಲಿನ ವಿಶೇಷ. ಭಕ್ತರಿಗೆ ಅನ್ನ ಪ್ರಸಾದಕ್ಕೆ ಮತ್ತು ತಂಗುವುದಕ್ಕೆ ವ್ಯವಸ್ಥೆ ಇದೆ.

(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net