ಸರ್ಕಾರಿ ನೌಕರರ ಜಾತಿ ಸರ್ವೆಗೆ ಆಯೋಗ ಸಿದ್ಧತೆ; ಸಿಬ್ಬಂದಿ ವಿವರ ಕೋರಿ ಇಲಾಖೆಗಳಿಗೆ ಪತ್ರ

Survey
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹಿಂದುಳಿದ ವರ್ಗಗಳ ಸ್ಥಾನಮಾನಕ್ಕಾಗಿ ಅನೇಕ ಜಾತಿಗಳಿಂದ ಪ್ರಯತ್ನ ನಡೆದಿರುವ ಬೆನ್ನಲ್ಲೇ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಲ್ಲಿ ಯಾವ ಜಾತಿಗೆ ಸೇರಿದವರು ಎಷ್ಟಿದ್ದಾರೆ? ಅವರ ಶೈಕ್ಷಣಿಕ ಅರ್ಹತೆಗಳೇನೆಂಬ ಮಾಹಿತಿ ಸಂಗ್ರಹಕ್ಕೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ.

ಎಚ್. ಕಾಂತರಾಜ್ ಅವಧಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಅಧ್ಯಯನ ವರದಿಯನ್ನು ಸರ್ಕಾರ ಇನ್ನೂ ಸ್ವೀಕರಿಸಿಲ್ಲ. ಆಯೋಗದ ಕಚೇರಿ ಕಪಾಟಿನಲ್ಲಿಯೇ ವರದಿ ಕೊಳೆಯುತ್ತಿದೆ. ಅದರ ನಡುವೆಯೇ ಸರ್ಕಾರ ನೌಕರರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.

ಇಲಾಖೆಗಳಿಗೆ ಪತ್ರ: ಹಿಂದುಳಿದ ವರ್ಗಗಳ ಆಯೋಗ ಎಲ್ಲ ಇಲಾಖೆಗಳು, ವಿಶ್ವವಿದ್ಯಾಲಯಗಳು, ನಿಗಮ ಮತ್ತು ಮಂಡಳಿಗಳು, ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳಿಗೆ ಪತ್ರ ಬರೆದು ಪ್ರತಿ ನೌಕರರ ವಿವರ ಕೋರಿದೆ. ಆದರೆ ಕೆಲವು ಇಲಾಖೆಗಳು ನೌಕರರು ಯಾವ ಪ್ರವರ್ಗಕ್ಕೆ ಸೇರುತ್ತಾರೆ ಎಂಬ ಮಾಹಿತಿ ಮಾತ್ರ ನೀಡಿ ಕೈ ತೊಳೆದು ಕೊಂಡಿವೆ. ಆದ್ದರಿಂದ ಆಯೋಗ ಮತ್ತೊಮ್ಮೆ ಪತ್ರ ಬರೆದು ನಿರ್ದಿಷ್ಟ ಜಾತಿಯ ಮಾಹಿತಿ ನೀಡುವಂತೆ ಕೋರಿರುವುದಾಗಿ ಮೂಲಗಳು ತಿಳಿಸಿವೆ.

ಉದ್ದೇಶವೇನು?: ಹಿಂದುಳಿದ ವರ್ಗಗಳ ಆಯೋಗದ ಎದುರು ಮೀಸಲಾತಿಗೆ ಬೇಡಿಕೆ, ಮೀಸಲಾತಿ ವರ್ಗೀಕರಣ, ಪ್ರಮಾಣ ಹೆಚ್ಚಳ ಹೀಗೆ ವಿವಿಧ ಮನವಿಗಳು 50ಕ್ಕೂ ಹೆಚ್ಚು ಜಾತಿಗಳಿಂದ ಬಂದಿವೆ. ಸರ್ಕಾರಕ್ಕೆ ಜಾತಿಗಳ ಬಗ್ಗೆ ಶಿಫಾರಸು ಮಾಡಲು ಆಯೋಗದ ಬಳಿ ಯಾವ ಜಾತಿ ಎಷ್ಟು ಸೌಲಭ್ಯ ಪಡೆದಿದೆ, ಸಾಮಾಜಿಕ ಸ್ಥಿತಿ ಏನಿದೆ ಎಂಬುದರ ಮಾಹಿತಿಯೇ ಇಲ್ಲ. ಆದ್ದರಿಂದಲೇ ಆಯೋಗ ಎಲ್ಲ ನೌಕರರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಚೆನ್ನೈ ಹೈಕೋರ್ಟ್ ಪ್ರಕರಣವೊಂದರಲ್ಲಿ ಒಂದು ಜಾತಿಗೆ ಮೀಸಲಾತಿ ನೀಡಿದ ನಂತರ ಉಪಜಾತಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ನೀಡಿದೆ. ರಾಜ್ಯದಲ್ಲೂ ಇದೇ ತೀರ್ಪಿನ ಆಧಾರದ ಮೇಲೆ ಸರ್ಕಾರಕ್ಕೆ ಶಿಫಾರಸು ನೀಡುವ ಸಲುವಾಗಿ ಸರ್ಕಾರಿ ನೌಕರರ ಅಂಕಿಅಂಶದ ಅಗತ್ಯವಿದೆ ಎಂದು ಮೂಲಗಳು ಹೇಳುತ್ತವೆ. ಮೀಸಲಾತಿಯ ಸೌಲಭ್ಯ ಸಿಗಬೇಕಾದ ಸಮಾಜಕ್ಕೆ ಅದು ಸಿಗದೆ ಹೋದರೆ ಆ ಸಮಾಜದ ಮಕ್ಕಳು ಅನ್ಯಾಯಕ್ಕೆ ಒಳಗಾಗುತ್ತಾರೆ.

ಆದ್ದರಿಂದ ಸರ್ಕಾರದ ಮುಂದಿರುವ ಶಿಫಾರಸುಗಳ ಜಾರಿಗೆ ಸರಿಯಾದ ಅಂಕಿಅಂಶ ಬೇಕಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಇತರ ಕಡೆಯಿಂದ ಸುಮಾರು 7 ಲಕ್ಷಕ್ಕೂ ಅಧಿಕ ನೌಕರರ ಜಾತಿ ಮತ್ತು ಶೈಕ್ಷಣಿಕ ಅರ್ಹತೆಯ ಮಾಹಿತಿ ಆಯೋಗಕ್ಕೆ ಬರಬೇಕು. ಅದನ್ನು ಕ್ರೋಡೀಕರಿಸಿದ ನಂತರವಷ್ಟೇ ಆಯೋಗ ಏನಾದರೂ ಶಿಫಾರಸು ಮಾಡಲು ಸಾಧ್ಯವಾಗುತ್ತದೆ.

ಸರ್ಕಾರದ ಮುಂದೆ ಬಾಕಿ: ಹಿಂದುಳಿದ ವರ್ಗಗಳ ಆಯೋಗದಿಂದ ವಿವಿಧ ಜಾತಿಗಳಿಗೆ ಸಂಬಂಧಿಸಿದಂತೆ 2001 ರಿಂದ ಶಿಫಾರಸು ಆಗಿರುವ ಪ್ರಸ್ತಾವನೆಗೆ ಒಪ್ಪಿಗೆ ಸಿಗುವುದು ಬಾಕಿ ಇದೆ. ಮುನಿರಾಜು, ದ್ವಾರಕಾನಾಥ್, ಸಿದ್ದಗಂಗಪ್ಪ, ಶಂಕ್ರಪ್ಪ, ಕಾಂತರಾಜ್ ಅವರ ಅವಧಿಯಲ್ಲಿ ಹಲವು ಶಿಫಾರಸು ಆಗಿವೆ. ಈಗಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಈ ಬಗ್ಗೆ ರ್ಚಚಿಸಿದ್ದರು. ಆದಷ್ಟು ಬೇಗ ಶಿಫಾರಸು ಒಪು್ಪವ ಅಥವಾ ತಿರಸ್ಕರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಎರಡು ಸಮಿತಿ ಅಧ್ಯಯನ: ಎಸ್​ಟಿ ಮೀಸಲಾತಿ ಪ್ರಮಾಣ ಶೆ. 3 ರಿಂದ 7ಕ್ಕೆ ಏರಿಕೆ ಮಾಡುವ ಬಗ್ಗೆ ನ್ಯಾ. ನಾಗಮೋಹನ್​ದಾಸ್ ಸಮಿತಿ ಅಧ್ಯಯನ ಮಾಡಿದೆ. ಪಂಚಮಸಾಲಿ ಸಮಾಜ ಹಾಗೂ ಇತರ ಜಾತಿಗಳ ಬಗ್ಗೆ ನ್ಯಾ. ಸುಭಾಷ್ ಅಡಿ ಅಧ್ಯಯನ ನಡೆಸಿದ್ದಾರೆ. ಸುಭಾಷ್ ಅಡಿ ಸಮಿತಿ ಏನೇ ವರದಿ ಕೊಟ್ಟರೂ ಅಂತಿಮವಾಗಿ ಆಯೋಗವೇ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗುತ್ತದೆ.

ಯಾರ್ಯಾರ ಬೇಡಿಕೆ ಇದೆ?

· ಎಸ್​ಟಿಗೆ ಸೇರಿಸುವಂತೆ ಕುರುಬರ ಒತ್ತಾಯ

· ಪ್ರವರ್ಗ 2(ಎ)ಗೆ ಪಂಚಮಸಾಲಿಗಳ ಬೇಡಿಕೆ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಎಸ್​ಟಿಗಳ ಬೇಡಿಕೆ

· 40ಕ್ಕೂ ಹೆಚ್ಚು ಜಾತಿ, ಉಪಜಾತಿಗಳ ಅರ್ಜಿಗಳು ಆಯೋಗದ ಎದುರಿವೆ

· 3 (ಎ)ಗೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬೇಡಿಕೆ

ಜಾರಿಗೆ ಬಾರದ ವರದಿ: ಎಚ್. ಕಾಂತರಾಜ್ ಅಧ್ಯಕ್ಷರಾಗಿ ದ್ದಾಗ ಅಧ್ಯಯನ ಮಾಡಿ ಕೊಟ್ಟಿರುವ ವರದಿ ಜಾರಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಸೌಲಭ್ಯ ಸಮಾನವಾಗಿ ಹಂಚಿಕೆ ಯಾಗಬೇಕು. ಅದಕ್ಕೆ ತಕ್ಕಂತೆ ಶಿಫಾರಸು ಮಾಡಲು ಅಗತ್ಯ ಮಾಹಿತಿ ಬೇಕಾಗುತ್ತದೆ. ಅನೇಕ ಜಾತಿಯವರು, ಉಪ ಜಾತಿಯವರು ಹಿಂದುಳಿದ ವರ್ಗಗಳಿಗೆ ಸೇರಿಸಲು ಮನವಿ ಮಾಡಿದ್ದಾರೆ. ಅದರ ಬಗ್ಗೆ ಅಧ್ಯಯನ ನಡೆದಿದೆ. | ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಮೀಸಲಾತಿ ಏನಿದೆ?

  • ಪರಿಶಿಷ್ಟ ಜಾತಿ -ಶೇ. 15
  • ಪರಿಶಿಷ್ಟ ಪಂಗಡ- ಶೇ.3
  • ಪ್ರವರ್ಗ 1 -ಶೇ 4
  • ಪ್ರವರ್ಗ 2(ಎ)- ಶೇ.15
  • ಪ್ರವರ್ಗ 2(ಬಿ) -ಶೇ.4
  • ಪ್ರವರ್ಗ 3 (ಎ) -ಶೇ. 4
  • ಪ್ರವರ್ಗ 3 (ಬಿ) -ಶೇ. 5
  • ಇಡಬ್ಲ್ಯೂಎಸ್ -ಶೇ.10
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net