

ರಾಯ್ಪುರ: ನೀವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಇರೋರಾದರೆ ನಿಮಗೆ ಆ ಒಬ್ಬ ಬಾಲಕನ ಬಗ್ಗೆ ನಿಮಗೆ ಗೊತ್ತಾಗಿಯೇ ಆಗಿರುತ್ತದೆ. ಜಾನೆ ಮೇರೆ ಜಾನೆ ಮನ್, ಬಚ್ಪನ್ ಕಾ ಪ್ಯಾರ್ ಮೇರಾ ಬೂಲ್ ನಹೀ ಜಾನಾ ರೇ.. ಎಂದು ಮುಗ್ದತೆಯಿಂದ ಹಾಡು ಹೇಳಿರುವ ಆ ಬಾಲಕನ ವಿಡಿಯೋ ನೋಡಿದಾಕ್ಷಣ ನೀವೂ ಲೈಕ್ ಬಟನ್ ಒತ್ತಿರುತ್ತೀರಿ.
ಹೌದು. ಇತ್ತೀಚೆಗೆ ಚತ್ತೀಸಗಢದ ಸಹದೇವ್ ಕುಮಾರ್ ಹೆಸರಿನ ಬಾಲಕನ ವಿಡಿಯೋ ಸಕತ್ ವೈರಲ್ ಆಗಿದೆ. ಸರ್ಕಾರಿ ಶಾಲೆಯ ಸಮವಸ್ತ್ರ ಧರಿಸಿ ಜೋರು ಧ್ವನಿಯಲ್ಲಿ ಹಾಡು ಹೇಳಿರುವ ಆ ಬಾಲಕನ ಮುಗ್ದತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆ ವಿಡಿಯೋ ಅದೆಷ್ಟರ ಮಟ್ಟಿಗೆ ವೈರಲ್ ಆಗಿದೆಯೆಂದರೆ ಸ್ವತಃ ಆ ಹಾಡಿನ ಗಾಯಕರಾಗಿರುವ ಬಾದ್ಶಾ ಕೂಡ ಸಹದೇವ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಚಂಡೀಗಢಕ್ಕೆ ಬಾ ಎಂದು ಆಮಂತ್ರಣವನ್ನೂ ಕೊಟ್ಟಿದ್ದಾರೆ. ಅವರಿಬ್ಬರು ಸೇರಿ ಮತ್ತೊಂದು ಹಾಡನ್ನು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದ ಹಾಗೆ ಸಹದೇವ್ನನ್ನು ಚತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೂಡ ಭೇಟಿ ಮಾಡಿ ಮಾತನಾಡಿಸಿದ್ದಾರೆ. ಆತನ ವೈರಲ್ ವಿಡಿಯೋವನ್ನು ನೋಡಿದ್ದ ಅವರು, ಬಾಲಕನ ಹೆಗಲ ಮೇಲೆ ಕೈ ಹಾಕಿ ನಿಂತು, ಆ ಹಾಡನ್ನು ನನಗಾಗಿ ಒಮ್ಮೆ ಹಾಡು ಎಂದು ಹೇಳಿಸಿದ್ದಾರೆ. ಅದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)