ದುರ್ವಾಸನೆ ಬರುತ್ತಿದ್ದ ತಾಯಿಯ ಶವದ ಜತೆಯೇ ಇತ್ತು ಹಸಿವಿನಿಂದ ನರಳುತ್ತಿದ್ದ ಮಗು! ಕರೊನಾ ಭಯದಿಂದ ಹತ್ತಿರವೂ ಬಾರದ ಕುಟುಂಬಸ್ಥರು!

ಬಬಬ
Published on

ಮುಂಬೈ: ಕರೊನಾ ಕೆಲವು ಜನರಲ್ಲಿ ಮಾನವೀಯತೆ, ಸಂಬಂಧಗಳನ್ನೂ ಮರೆಸಿಬಿಟ್ಟಿದೆ. ಕಣ್ಣೆದುರೇ ನರಳಾಡುತ್ತಿದ್ದರೂ ಸಹಾಯ ಮಾಡದೆ, ದೂರ ಉಳಿಯುವಂತೆ ಮಾಡಿಸಿಬಿಟ್ಟಿದೆ. ಅದೇ ರೀತಿಯ ವರ್ತನೆಯಿಂದಾಗಿ ಇನ್ನೂ ವರ್ಷ ಪೂರೈಸದ ಮಗು ತಾಯಿ ಶವದೊಂದಿಗೆ ಎರಡು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪುಣೆಯ ಪಿಂಪ್ರಿ ಚಿಂಚ್ವಾಡಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸರಸ್ವತಿ ರಾಜೇಶ್ ಕುಮಾರ್ (29) ಹೆಸರಿನ ಮಹಿಳೆ ಮನೆ ಬಾಗಿಲು ಹಾಕಿಕೊಂಡಿದ್ದು, ಒಳಗೇ ಮೃತಳಾಗಿದ್ದಾಳೆ. ಆಕೆ ಕಳೆದ ಶನಿವಾರದಂದೇ ಮೃತಳಾಗಿದ್ದಾಳೆ. ಸರಸ್ವತಿ ಮೃತಳಾದ ವಿಚಾರ ಕುಟುಂಬಸ್ಥರಿಗೆ ತಿಳಿದುಬಂದಿದೆಯಾದರೂ ಕರೊನಾ ಭಯದಿಂದ ಅವರ್ಯಾರೂ ಆಕೆಯ ಮನೆ ಬಳಿಯೂ ಸುಳಿದಿಲ್ಲ. ಎರಡು ದಿನವಾದ ಮೇಲೆ ಅಂದರೆ ಸೋಮವಾರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದೆ. ಅದನ್ನು ಸಹಿಸಲಾಗದ ಮನೆ ಮಾಲೀಕ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಸರಸ್ವತಿ ಶವ ಬಿದ್ದಿದ್ದರೆ ಅದರ ಪಕ್ಕದಲ್ಲಿ ಆಕೆಯ ವರ್ಷ ತುಂಬದ ಮಗ ಮಲಗಿರುವುದು ಕಂಡು ಬಂದಿದೆ. ಎರಡು ದಿನಗಳಿಂದ ಊಟ ತಿಂಡಿಯಿಲ್ಲದ ಮಗು ಅಲ್ಲೇ ಸುಸ್ತಾಗಿ ಮಲಗಿತ್ತು. ಅದನ್ನು ಕಂಡ ಗ್ರಾಮಸ್ಥರು ಮಗುವಿಗೂ ಕರೊನಾ ಇರಬಹುದು ಎನ್ನುವ ಭಯದಿಂದ ಮಗುವನ್ನು ಮುಟ್ಟಲೂ ಮುಂದಾಗಿಲ್ಲ. ಆದರೆ ಸ್ಥಳಕ್ಕೆ ಬಂದಿದ್ದ ಸುಶೀಲಾ ಮತ್ತು ರೇಖಾ ಹೆಸರಿನ ಮಹಿಳಾ ಪೊಲೀಸರು ಮಗುವನ್ನು ಎತ್ತಿಕೊಂಡು ಅದಕ್ಕೆ ಹಾಲು ಕುಡಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಕರೊನಾ ವರದಿ ನೆಗೆಟಿವ್​ ಬಂದಿದೆ.

ಸರಸ್ವತಿ ಗಂಡ ರಾಜೇಶ್​ ಉತ್ತರ ಪ್ರದೇಶಕ್ಕೆ ಕೆಲಸದ ನಿಮಿತ್ತ ಹೋಗಿರುವುದಾಗಿ ತಿಳಿದುಬಂದಿದೆ. ಆತನನ್ನು ವಾಪಾಸು ಕರೆಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸರಸ್ವತಿ ಶವದ ಮರಣೋತ್ತರ ಪರೀಕ್ಷೆ ಬಂದ ನಂತರ ಆಕೆಯ ಸಾವಿಗೆ ನಿಜ ಕಾರಣ ತಿಳಿದುಬರಲಿದೆ. (ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net