

ಹೈದರಾಬಾದ್: ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವ ಮನ ಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೊಡೆಯಲು ಮುಂದಾಗಿದ್ದ ಗಂಡನಿಂದ ಪಾರಾಗಲು ಮಗುವನ್ನು ಗಟ್ಟಿಗೆ ಹಿಡಿದುಕೊಂಡು ಅಟ್ಟಾಡಿದ ತಾಯಿಯ ತೋಳಿನಲ್ಲೇ ಮಗು ಉಸಿರುಗಟ್ಟಿ ಸತ್ತಿರುವುದಾಗಿ ವರದಿಯಾಗಿದೆ.
ತೆಲಂಗಾಣದ ಸೈದಾಬಾದ್ನ ಪೂಸಲ ಬಸ್ತಿ ನಿವಾಸಿಗಳಾದ ಪಿ.ರಾಜೇಶ್ ಮತ್ತು ಜಾಹ್ನವಿ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಮುದ್ದಾದ ಗಂಡುಮಗುವಿನ ಅಪ್ಪ-ಅಮ್ಮ ಆಗಿದ್ದರು. ಶುಕ್ರವಾರದಂದು ಮಗುವಿಗೆ ಹಾಲು ಕುಡಿಸುವ ಬಗ್ಗೆ ವಾಗ್ವಾದವಾದ ಹಿನ್ನೆಲೆಯಲ್ಲಿ ರಾಜೇಶ್ ಜಾಹ್ನವಿಗೆ ಹೊಡೆಯಲು ಪೈಪ್ ಕೈಗೆತ್ತಿಕೊಂಡ. ಮಗುವನ್ನು ತನ್ನ ತೋಳಿನಲ್ಲಿ ಎತ್ತಿಕೊಂಡಿದ್ದ ಆ ತಾಯಿ, ಅದನ್ನು ಗಟ್ಟಿಗೆ ಹಿಡಿದುಕೊಂಡು, ಹೊಡೆತ ತಪ್ಪಿಸಿಕೊಳ್ಳಲು ಮನೆಯೆಲ್ಲಾ ಓಡಾಡಿದಳು ಎನ್ನಲಾಗಿದೆ.
ಸ್ವಲ್ಪ ಸಮಯದ ನಂತರ ಮಗು ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದದ್ದನ್ನು ಗಮನಿಸಿದ ದಂಪತಿ, ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ನಡೆಸಿದ ವೈದ್ಯರು, ಮಗು ಉಸಿರುಗಟ್ಟಿ ಸತ್ತುಹೋಗಿದೆ ಎಂದು ಘೋಷಿಸಿದರು. ಮಾಹಿತಿ ತಿಳಿದ ಸೈದಾಬಾದ್ ಪೊಲೀಸರು ದಂಪತಿಯ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)