ನಾಯಿ ವಿಷಯಕ್ಕೆ ಜಗಳ... ಸಂಧಾನಕ್ಕೆ ಕರೆದ ರಾತ್ರಿ ನಡೆದೇ ಹೋಯ್ತು ದುರಂತ

gururaj
ಕೊಲೆಯಾದ ಗುರುರಾಜ ಕುಲಕರ್ಣಿ
Published on

ಕಲಬುರಗಿ: ಕಲಬುರಗಿಯ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ನಗರದಲ್ಲಿ ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಗುರುರಾಜ್ ಕುಲಕರ್ಣಿ(35) ಕೊಲೆಯಾದವರು. ನಾಯಿ ವಿಚಾರಕ್ಕೆ ಜಗಳವಾಡುತ್ತಿದ್ದ ಪಕ್ಕದ ಮನೆಯವನೇ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಗುರುರಾಜ ಸಾಕಿದ್ದ ನಾಯಿಗೆ ಪಕ್ಕದ ಮನೆಯ ಪವನ್ ಜಾಗಿರ್ದಾರ್ ಪದೇ ಪದೇ ಕಲ್ಲು ಹೊಡೆಯುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಕೂಡ ಇದೇ ಕಾರಣಕ್ಕೆ ಜಗಳವಾಗಿತ್ತು. ಗುರುವಾರ ರಾತ್ರಿ ಈ ವಿಚಾರವಾಗಿ ಸಂಧಾನ ಮಾಡಿಕೊಳ್ಳೋಣ ಬಾ ಎಂದು ಪವನ್ ಹಾಗೂ ಆತನ ಗೆಳೆಯರು ಗುರುರಾಜ ಅವರನ್ನು ಕರೆದಿದ್ದರು.

ಮಾತುಕತೆ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಹೊಡೆದಾಡುವ ವೇಳೆ ಗುರುರಾಜ ಅವರ ಮೇಲೆ ಪವನ್ ಕಲ್ಲಿನಿಂದ ಹಲ್ಲೆ ಮಾಡಿದ. ತೀವ್ರ ರಕ್ತಸ್ರಾವದಿಂದ ಗುರುರಾಜ ಸ್ಥಳದಲ್ಲೇ ಮೃತಪಟ್ಟರು ಎಂದು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net