

ಸರಗೂರು: ಅಸ್ಪಶ್ಯತೆ, ಸಾಮಾಜಿಕ ವ್ಯವಸ್ಥೆಯಲ್ಲಿನ ತಾರತಮ್ಯದ ವಿರುದ್ಧ ಹೋರಾಡಿದ ಧೀಮಂತ ನಾಯಕ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜೀವನ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಬಿ.ಮಟಕೆರೆ ಗ್ರಾಪಂ ಸದಸ್ಯ ಕುರ್ಣೇಗಾಲ ಬೆಟ್ಟಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದಲಿತರ ಅಭಿವೃದ್ಧಿಗೆ ಅಂಬೇಡ್ಕರ್ ಅವರಂತೆ ಶ್ರಮಿಸಿದ ಡಾ.ಬಾಬು ಜಗಜೀವನರಾಮ್ ಅವರ ಜೀವನ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಹಿಂದುಳಿದ ವರ್ಗದವರ ಏಳಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದರು.
ಡಾ.ಬಾಬು ಜಗಜೀವನರಾಮ್ ಅವರು ಶಾಲೆಯಲ್ಲಿದ್ದಾಗಲೇ ಮುಖ್ಯಶಿಕ್ಷಕರು ಕುಡಿಯುವ ನೀರು ನೀಡುವಲ್ಲಿ ಮಾಡುತ್ತಿದ್ದ ತಾರತಮ್ಯವನ್ನು ಖಂಡಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಜತೆಗೂಡಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದರು. ದೇಶದ ಕೃಷಿ ಸಚಿವರಾಗಿ ಕ್ರಾಂತಿಯನ್ನೇ ಸೃಷ್ಟಿಸಿ ರಾಸಾಯನಿಕ ಗೊಬ್ಬರ ಪದ್ಧತಿಯನ್ನು ಪರಿಚಯಿಸಿ, ಆಧುನಿಕ ಬೇಸಾಯದ ಮೂಲಕ ಹೆಚ್ಚಿನ ಆದಾಯ ಗಳಿಕೆಗೆ ನಾಂದಿ ಹಾಡುವ ಮೂಲಕ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ವಿದೇಶಗಳಿಗೆ ರಫ್ತು ಮಾಡುವ ಪದ್ಧತಿ ಅನುಸರಿಸಿದರು ಎಂದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ. ರಾಜಣ್ಣ ಮಾತನಾಡಿ, ಬಾಬು ಜಗಜೀವನರಾಮ್ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಹಸಿರು ಕ್ರಾಂತಿಯ ಹರಿಕಾರರಾಗಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಎಂದೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಅವರ ಸರಳ ಸಜ್ಜನಿಕೆಯನ್ನು ನಾಡಿನ ಪ್ರತಿಯೊಬ್ಬ ಪ್ರಜೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅವರು ಉಪ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಗೂಳಿಸಿದ ಯೋಜನೆಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಬಾಬು ಜಗಜೀವನರಾಮ್ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಕಲ್ಲಂಬಾಳು ನಾಗಣ್ಣ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಕ್ಕಿದೆ ಎಂದರೆ ಅದು ಇಂತಹ ನಾಯಕರ ಪ್ರಯತ್ನದ ಫಲವಾಗಿದೆ. ಮಹಾನ್ ನಾಯಕರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಮಾಜಿ ಜಿಪಂ ಸದಸ್ಯ ಚಿಕ್ಕವೀರನಾಯಕ ಮಾತನಾಡಿದರು.
ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ, ಪ.ಪಂ. ಸದಸ್ಯೆ ಸಣ್ಣ ತಾಯಮ್ಮ, ತಾ.ಪಂ. ಮಾಜಿ ಸದಸ್ಯ ವೈಕುಂಠಯ್ಯ, ಮುಖಂಡ ಟೌನ್ ಗಡಿಯಜಮಾನ, ಹೆಜ್ಜೂರ ಪ್ರಸಾದ್, ಪೈಂಟ್ ನಾಗರಾಜು, ರಾಮಚಂದ್ರ, ಸ್ವಾಮಿ, ಆಟೋ ರಮೇಶ್, ಪ.ಪಂ. ಮಾಜಿ ಅಧ್ಯಕ್ಷ ಶಿವರಾಜು, ಮುಳ್ಳೂರು ಸಿದ್ದಪ್ಪ, ಜವರಣ್ಣ, ಪುಟ್ಟ ಹನುಮಯ್ಯ, ಮಹೇಂದ್ರ ಹೂವಿನಕೊಳ, ಮಹೇಶ್, ಮಟಕೆರೆ ಶಿವಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು , ಶಿರಸ್ತೇದಾರ್ ಗುರುರಾಜ್, ಉಪತಹಸೀಲ್ದಾರ್ ಸುನೀಲ್, ರವಿಂದ್ರ, ಪ.ಪಂ. ಮುಖ್ಯಾಧಿಕಾರಿ ಎಸ್.ಎಸ್. ಮಂಜುನಾಥ್, ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಆದಿಕರ್ನಾಟಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಚನ್ನಿಪುರ ಮಲ್ಲೇಶ್, ಜಿವಿಕ ಶ್ರೀನಿವಾಸ, ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ಮೂರ್ತಿ, ನಾಗರಾಜು, ಕಬಿನಿ ನೀರಾವರಿ ಉಪವಿಭಾಗ ಇಲಾಖೆ ಸಿಬ್ಬಂದಿ ಮಂಜುಳಾ, ಚೈತ್ರಾ, ಸುಷ್ಮಿತಾ ಇತರರು ಇದ್ದರು.