

ತಿ.ನರಸೀಪುರ: ಅಸ್ಪಶ್ಯತೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿ ಸಮ ಸಮಾಜಕ್ಕಾಗಿ ಶ್ರಮಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ಸುರೇಶ್ ಆಚಾರ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ ಸಂವಿಧಾನ ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿದ್ದಾರೆ. ಭಾರತದ ಎಲ್ಲ ವರ್ಗದ ಕಟ್ಟ ಕಡೆಯ ಜನರಿಗೂ ಸಂವಿಧಾನದ ಸೌಲಭ್ಯಗಳು ತಲುಪುವಲ್ಲಿ ಶ್ರಮಿಸಿದ್ದಾರೆ ಎಂದರು.
ಅಂಬೇಡ್ಕರ್ ಅವರ ಸಾರ್ಥಕ ಬದುಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಶೋಷಿತ ಸಮುದಾಯಗಳ ಏಳಿಗೆಗೆ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಸಮಾನವಾಗಿ ಬದುಕಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ ಮಂಗಳಾಮೂರ್ತಿ ಮಾತನಾಡಿ, ದೇಶದಲ್ಲಿ ತಾಂಡವಾಡುತ್ತಿದ್ದ ಅಸ್ಪಶ್ಯತೆ ಮತ್ತು ಜಾತೀಯತೆ ವಿರುದ್ಧ ಹೋರಾಟ ನಡೆಸಿದ ನಡೆಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತ ಸಮುದಾಯಗಳಿಗೆ ತಮ್ಮದೇ ಆದ ಕೊಡುಗೆ ನೀಡಿ, ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ರಚಿಸಿದ್ದಾರೆ. ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತ ಅಲ್ಲ. ಮನುಕುಲಕ್ಕೆ ಅವರ ಕೊಡುಗೆ ಅಪಾರವಾದದ್ದು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿ ಸಂವಿಧಾನದ ಹಕ್ಕುಗಳ ಬಗ್ಗೆ ಜನರಿಗೆ ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಮೊದಲು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಜಿಪಂ ಮಾಜಿ ಅಧ್ಯಕ್ಷ ಸಿದ್ದಾರ್ಥ, ಕೆ.ಎನ್. ಪ್ರಭುಸ್ವಾಮಿ, ಕಿರಗಸೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಪುರಸಭಾ ಸದಸ್ಯ ಪ್ರಕಾಶ್, ತಾಪಂ ಮಾಜಿ ಸದಸ್ಯ ರಾಮಲಿಂಗಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಚಿಕ್ಕಯ್ಯ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಾ. ಚಂದ್ರಶೇಖರ್, ಸೋಸಲೆ ಶಶಿಕಾಂತ್, ಶಿವಕುಮಾರ್, ಎಂ.ಮಿಥುನ್, ನಂಜುಂಡಯ್ಯ ಗುತ್ತಿಗೆದಾರ ಕೆಂಪಯ್ಯನಹುಂಡಿ ಮಾಧು, ಜಗಜೀವನರಾಂ ಸಂಘದ ಅಧ್ಯಕ್ಷ ಪುಟ್ಟಯ್ಯ, ಮಾಜಿ ಅಧ್ಯಕ್ಷ ಸಿದ್ದರಾಜು, ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಮಲಿಯೂರು ಶಂಕರ್, ಎವಿಎಸ್‌ಎಸ್ ರಾಮು, ತ್ರಿವೇಣಿನಗರ ಮಹದೇವಮ್ಮ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಸಿ.ಕೃಷ್ಣ, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ, ಕೃಷಿ ಸಹಾಯಕ ನಿರ್ದೇಶಕಿ ಸುಹಾಸಿನಿ, ಪುರಸಭಾ ಮುಖ್ಯಾಧಿಕಾರಿ ವಸಂತಕುಮಾರಿ ಹಾಜರಿದ್ದರು.