

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹಣದ ಅಕ್ರಮ ವರ್ಗಾವಣೆ ಪ್ರಕರಣದಡಿ ಮಾಜಿ ಸಚಿವ ನಾಗೇಂದ್ರರನ್ನು ಇಡಿ ಬಂಧಿಸಿ, ವಿಚಾರಣೆ ನಡೆಸುತ್ತಿತ್ತು. ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯವು ನಾಗೇಂದ್ರ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರ್ಟ್ಗೆ ಮನವಿ ಮಾಡಿತ್ತು. ಆದರೆ, ಇದೀಗ ನ್ಯಾಯಾಲಯವು ಆರೋಪಿಯನ್ನು ಆಗಸ್ಟ್ 03ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಎಂದು ಆದೇಶಿಸಿದೆ.
ವಾದ-ಪ್ರತಿವಾದ ಆಲಿಸುವ ವೇಳೆ ಆರೋಪಿ ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್ ನಾಗೇಂದ್ರಗೆ ಜಾಮೀನು ಅರ್ಜಿ ಸಲ್ಲಿಸುವ ಕುರಿತು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶರು, ಜಾಮೀನಿಗೆ ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾರೆ. ಇದರೊಟ್ಟಿಗೆ ನಾಗೇಂದ್ರ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇರುವ ಹಿನ್ನೆಲೆ ಚಿಕಿತ್ಸೆಗೆ ಜೈಲು ಅಧಿಕಾರಿಗಳಿಗೆ ತಾವು ನಿರ್ದೇಶನ ಕೊಡಬೇಕು ಎಂದು ಮನವಿ ಮಾಡಿದರು.