

ಬೆಂಗಳೂರು: ರಾಜ್ಯದ 315 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ವಿುಸಿರುವ ಬಡಾವಣೆ ಮತ್ತು ನಕ್ಷೆ ಮಂಜೂರಾತಿ ಇಲ್ಲದೆ ನಿರ್ವಿುಸಿದ ಕಟ್ಟಡಗಳಿಗೆ ಬಿ-ಖಾತೆ ನೀಡಿ ಕಟ್ಟಡ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕಾನೂನು ತಿದ್ದುಪಡಿಗೆ ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸುವ ಸಂಬಂಧ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯ, ಸಚಿವರಾದ ಎಚ್.ಕೆ. ಪಾಟೀಲ್, ಕೃಷ್ಣಬೈರೇಗೌಡ, ರಹೀಂ ಖಾನ್ ಸದಸ್ಯರಾಗಿದ್ದ ಸಮಿತಿಯು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಿ ಶಿಫಾರಸು ಸಲ್ಲಿಸಿತ್ತು. ಅದನ್ನು ಸಂಪುಟ ಸಭೆ ಒಪ್ಪಿದೆ.
ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಅಂದಾಜು 34.35ಲಕ್ಷಕ್ಕೂ ಹೆಚ್ಚು ಅನಧಿಕೃತವಾಗಿವೆ. ಈ ಸ್ವತ್ತುಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಮೂಲಸೌಕರ್ಯವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಕಲ್ಪಿಸಲಾಗುತ್ತಿದ್ದರೂ ತೆರಿಗೆ ವಿಧಿಸಲು ಅವಕಾಶ ಇರಲಿಲ್ಲ.
ಸಂಪುಟ ಕೈಗೊಂಡಿರುವ ನಿರ್ಣಯದಿಂದಾಗಿ ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳು ಮತ್ತು ಅನುಮೋದನೆ ಇಲ್ಲದ ಬಡಾವಣೆಗಳಲ್ಲಿನ ವಸತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ‘ಬಿ ವಹಿ’ಯಲ್ಲಿ ದಾಖಲಿಸಿ ತೆರಿಗೆ ಸಂಗ್ರಹಿಸಬಹುದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯವೂ ಆಗಲಿದೆ. ಅನಧಿಕೃತ ಬಡಾವಣೆಗಳ ಮತ್ತು ಕಂದಾಯ ಭೂಮಿಯಲ್ಲಿ ಮನೆ ನಿರ್ವಿುಸಿದ ಮಧ್ಯಮ ಮತ್ತು ಬಡ ವರ್ಗದವರಿಗೆ ಹೊರೆ ಆಗದ ರೀತಿಯಲ್ಲಿ ಕಂದಾಯ ನಿಗದಿಗೆ ಸಮಿತಿ ಶಿಫಾರಸು ಮಾಡಿದೆ.
ಅಕ್ರಮ ನಿಯಂತ್ರಣಕ್ಕೆ ಕ್ರಮ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಅನಧಿಕೃತ ಮಾರಾಟವನ್ನು ನಿಯಂತ್ರಿಸಲು ಇ-ಆಸ್ತಿಯಡಿ ಹೊರತುಪಡಿಸಿ ಯಾವುದೇ ಮಾದರಿಯಲ್ಲಿ ನೋಂದಣಿಗೆ ಅವಕಾಶ ಇಲ್ಲದಂತೆ ಮಾಡಲು ಉದ್ದೇಶಿಸಲಾಗಿದೆ. ಅನುಮತಿ ಇಲ್ಲದೆ ಕಂದಾಯ ಭೂಮಿಯಲ್ಲಿ ಬಡಾವಣೆ ನಿರ್ವಿುಸಿದರೆ ನಿವೇಶನ ಮಾರಾಟಕ್ಕೆ ಅವಕಾಶವೇ ಇರುವುದಿಲ್ಲ. ಕಾವೇರಿ ತಂತ್ರಾಂಶದಲ್ಲೇ ಇದಕ್ಕೆ ಕಡಿವಾಣ ಹಾಕಲಾಗುತ್ತದೆ. ಇಂತಹ ಬಡಾವಣೆಯ ಪಹಣಿಯಲ್ಲೇ ಅನಧಿಕೃತ ಬಡಾವಣೆ ಎಂದು ನಮೂದಾಗುವ ಕಾರಣ ಖಾತೆ ಇಲ್ಲದ ಯಾವುದೇ ಸ್ವತ್ತಿನ ನೋಂದಣಿಯೇ ಸಾಧ್ಯವಾಗುವುದಿಲ್ಲ.
ಕ್ರಿಮಿನಲ್ ಮೊಕದ್ದಮೆ: ನಿಗದಿತ ದಿನಾಂಕದ ನಂತರದ ಯಾವುದೇ ಅನಧಿಕೃತ ಬಡಾವಣೆ ನಿರ್ವಣಕ್ಕೆ ಅವಕಾಶ ಇಲ್ಲದಂತೆ ಮಾಡಲು ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಒಂದೊಮ್ಮೆ ಅಕ್ರಮ ಬಡಾವಣೆ ನಿರ್ವಿುಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮತ್ತು ಅದಕ್ಕೆ ಅವಕಾಶ ನೀಡುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವೂ ಶಿಸ್ತುಕ್ರಮ ಜರುಗಿಸಲು ಹಾಗೂ ಲಕ್ಷ ರೂ. ದಂಡ ವಿಧಿಸಲೂ ಅವಕಾಶ ನೀಡಲಾಗಿದೆ. ಇದಕ್ಕೂ ಸಂಪುಟ ಸಭೆ ಅಂಗೀಕಾರ ನೀಡಿದೆ.