ಆಯುಷ್ಮಾನ್ ಭಾರತ್ vs ಆಪ್ ಯೋಜನೆ; ದೇಶಾದ್ಯಂತ ಆಪ್​ ಮಾಡೆಲ್​ ಜಾರಿಗೆ ಆಗ್ರಹ ​

Modi vs Kejri
Published on

ನವದೆಹಲಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಜಾರಿಗೆ ತರುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ ಬೆನ್ನಲ್ಲೇ ತಿರುಗೇಟು ನೀಡಿರುವ ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಕೇಂದ್ರದ ಆರೋಗ್ಯ ಯೋಜನೆ ಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಅ.29 ಮಾತನಾಡಿದ್ದ ಪಿಎಂ ಮೋದಿ, 70 ವರ್ಷಕ್ಕಿಂತ ಮೇಲ್ಪಟ್ಟ ದೆಹಲಿ ಮತ್ತು ಪಶ್ಚಿಮ ಬಂಗಾಳದ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆ ಅನ್ವಯ ವಾಗುತ್ತಿಲ್ಲ. ಇದಕ್ಕೆ ಅಲ್ಲಿನ ರಾಜ್ಯ ಸರ್ಕಾರಗಳೇ ಕಾರಣ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ದೆಹಲಿಯಲ್ಲಿ ವಾಸಿಸುವ ಪ್ರತಿ ವ್ಯಕ್ತಿ ಎಷ್ಟೇ ಖರ್ಚಾದರೂ ಸಂಪೂರ್ಣ ಚಿಕಿತ್ಸೆಯನ್ನು ಉಚಿತ ವಾಗಿಯೇ ಪಡೆಯುತ್ತಾನೆ. 5ರೂ. ಮಾತ್ರೆಯಿಂದ ಹಿಡಿದು 1 ಕೋಟಿ ರೂ. ಮೌಲ್ಯದ ಚಿಕಿತ್ಸೆಯವರೆಗೆ ಸರ್ಕಾರ ವೆಚ್ಚ ಭರಿಸುತ್ತಿದೆ ಎಂದಿದ್ದಾರೆ. ಇದಕ್ಕೆ ಪೂರಕವಾಗಿ, ಫಲಾನುಭವಿಗಳ ದಾಖಲೆಯನ್ನೂ ಅವರು ಹಂಚಿಕೊಂಡಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ) ಅನೇಕ ಅಕ್ರಮಗಳನ್ನು ಪತ್ತೆ ಹಚ್ಚಿದೆ ಮತ್ತು ಕೇಂದ್ರದ ಆರೋಗ್ಯ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು ಕಷ್ಟ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ. ಆರೋಗ್ಯದ ಸಮಸ್ಯೆಯನ್ನು ರಾಜಕೀಯಗೊಳಿಸಬಾರದು ಎಂದು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ ಕೇಜ್ರಿವಾಲ್, ಮೊದಲು ದೆಹಲಿ ಮಾದರಿಯನ್ನು ಅಧ್ಯಯನ ಮಾಡಬೇಕು ಮತ್ತು ಅದನ್ನು ದೇಶಾದ್ಯಂತ ಜಾರಿಗೊಳಿಸಬೇಕು. ಇದರಿಂದ ಜನರಿಗೆ ವಾಸ್ತವದಲ್ಲಿ ನೆರವಾಗಲಿದೆ ಎಂದು ಸಲಹೆ ನೀಡಿದರು. ವಿಚಿತ್ರ ಎಂದರೆ ಈ ತಿಂಗಳ ಆರಂಭದಲ್ಲಿ, ಆಸ್ಪತ್ರೆಗಳ ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿನ ವ್ಯತ್ಯಾಸದಿಂದಾಗಿ ದೆಹಲಿ ಆರೋಗ್ಯ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮಾಡಲಾಗುವ ಪಾವತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿತ್ತು!

ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ: ಆಯುಷ್ಮಾನ್ ಭಾರತ್ ಜಾರಿಗೊಳಿಸದ ಎಎಪಿ ಸರ್ಕಾರದ ವಿರುದ್ಧ ದೆಹಲಿ ಬಿಜೆಪಿ ಸಂಸದರು ದೆಹಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಜ್ಯ ಅಧ್ಯಕ್ಷ ವೀರೇಂದ್ರ ಸಚ್​ದೇವ ಹೇಳಿದ್ದಾರೆ. ಕೇಂದ್ರದ ಆರೋಗ್ಯ ವಿಮಾ ಯೋಜನೆಯಿಂದ ದೆಹಲಿಯಲ್ಲಿ ಲಕ್ಷಾಂತರ ಅರ್ಹರನ್ನು ವಂಚಿತಗೊಳಿಸಿದ್ದಕ್ಕಾಗಿ ಎಎಪಿ ಮತ್ತು ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಪಿಎಂಜೆಎವೈ ಯೋಜನೆ

  • ಯೋಜನೆಯು ಸರಿಸುಮಾರು 6 ಕೋಟಿ ಜನರು ಮತ್ತು ಸುಮಾರು 4.5 ಕೋಟಿ ಕುಟುಂಬಗಳಿಗೆ ಪ್ರಯೋಜನ ನೀಡುತ್ತಿದೆ
  • ಪಿಎಂಜೆಎವೈ ಯೋಜನೆಯು 7.37 ಕೋಟಿ ಆಸ್ಪತ್ರೆಗಳಲ್ಲಿ ದಾಖಲಾತಿಗಳನ್ನು ಸುಗಮಗೊಳಿಸಿದೆ. ಶೇ. 49ರಷ್ಟು ಫಲಾನುಭವಿಗಳು ಮಹಿಳೆಯರು. ಸಾರ್ವಜನಿಕರು ರೂ. 1 ಲಕ್ಷ ಕೋಟಿಗೂ ಅಧಿಕ ವೆಚ್ಚದಲ್ಲಿ ಲಾಭ ಪಡೆದಿದ್ದಾರೆ.
  • ಖಾಸಗಿ ಆರೋಗ್ಯ ವಿಮೆ ಹೊಂದಿರುವ ಅಥವಾ ನೌಕರರ ರಾಜ್ಯ ವಿಮಾ ಯೋಜನೆಯಲ್ಲಿ ದಾಖಲಾದ ಹಿರಿಯ ನಾಗರಿಕರು ಕೂಡ ಈ ಯೋಜನೆಯಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಾಗುತ್ತಾರೆ.
  • ಯೋಜನೆಯು 10.74 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳನ್ನು ಒಳಗೊಂಡಿದೆ. ಇದು ಜನಸಂಖ್ಯೆಯ ಶೇ. 40 ಪ್ರತಿಶತ ಬಡವರ್ಗವನ್ನು ಪ್ರತಿನಿಧಿಸುತ್ತದೆ.
  • 2024ರ ಸೆಪ್ಟೆಂಬರ್​ವರೆಗೆ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡಲು 12,696 ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 29,648 ಆಸ್ಪತ್ರೆಗಳನ್ನು ಎಂಪಾನೆಲ್ ಮಾಡಲಾಗಿದೆ.

ದೆಹಲಿ ಆಪ್ ಯೋಜನೆ

  • ದೆಹಲಿ ಆರೋಗ್ಯ ಯೋಜನೆ ಅಡಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿಲ್ಲದೇ ಉಚಿತ ಔಷಧ, ಪರೀಕ್ಷೆ ಮತ್ತು ಒಪಿಡಿ ಸೇವೆಗಳು ಲಭ್ಯ ಇವೆ.
  • ಫಲಾನುಭವಿಗಳಿಗೆ ಆದಾಯದ ಮಿತಿ ಇಲ್ಲ, ವೆಚ್ಚವನ್ನು ಲೆಕ್ಕಿಸದೆ ಎಲ್ಲ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಖಾತರಿ
  • 450 ಉಚಿತ ಪರೀಕ್ಷೆಗಳನ್ನು ಮತ್ತು 359 ಉಚಿತ ಔಷಧಿಗಳನ್ನು ಒದಗಿಸಲಾಗುತ್ತದೆ
  • ಅಪಘಾತಕ್ಕೀಡಾದವರಿಗೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಖಚಿತ

ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಾದ ಸುಮಾರು 50 ಪ್ರತಿಶತದಷ್ಟು ರೋಗಿಗಳು ಉತ್ತರಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಿಂದ ಬಂದವರೇ ಆಗಿದ್ದಾರೆ. ಹಾಗಾಗಿ, ಬಿಜೆಪಿ ನಾಯಕರು ಮೊದಲು ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿ ವಾಸ್ತವ ತಿಳಿದುಕೊಳ್ಳಬೇಕು

| ಪ್ರಿಯಾಂಕಾ ಕಕ್ಕರ್ ಆಪ್ ರಾಷ್ಟ್ರೀಯ ವಕ್ತಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net