ಬಡವರಿಗೆ ಆಯುಷ್ಮಾನ್ ರಕ್ಷಾಕವಚ

25 BIRUR 02
ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆಯುಷ್ಮಾನ್‌ಭವ ಅಭಿಯಾನ ಆರೋಗ್ಯ ಮೇಳದಲ್ಲಿ ತಾಲೂಕು ಆಡಳಿತ ವೈದ್ಯಾಧಿಕಾರಿ ರವಿಕುಮಾರ್ ಮಾತನಾಡಿದರು.
Published on

ಬೀರೂರು: ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕ ವೆಚ್ಚ ನಿರ್ವಹಿಸಲು ಆಯುಷ್ಮಾನ್ ಕಾರ್ಡ್ ಸಂಜೀವಿನಿಯಂತಿದೆ. ಅರ್ಹ ಪ್ರತಿಯೊಬ್ಬರೂ ಕಾರ್ಡ್ ಪಡೆದುಕೊಂಡು ಪ್ರಯೋಜನಗಳ ಮಾಹಿತಿ ತಿಳಿದುಕೊಳ್ಳಬೇಕು ಎಂದು ಕಡೂರು ತಾಲೂಕು ಆಡಳಿತ ವೈದ್ಯಾಧಿಕಾರಿ ರವಿಕುಮಾರ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಆಯುಷ್ಮಾನ್‌ಭವ ಅಭಿಯಾನದ ಆರೋಗ್ಯ ಮೇಳದಲ್ಲಿ ಮಾತನಾಡಿದರು.
ಹೃದಯ, ಕಿಡ್ನಿ ಮತ್ತು ನರವ್ಯೆಹ ಸಂಬಂಧಿ ಕಾಯಿಲೆಗಳು ಬಂದರೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಆಯುಷ್ಮಾನ್ ಕಾರ್ಡ್ ಇದ್ದರೆ ಬಿಪಿಎಲ್ ಕುಟುಂಬದವರಿಗೆ 5 ಲಕ್ಷ ರೂ.ವರೆಗೆ ನೆರವು ದೊರಕಲಿದೆ. ಮೂರು ಹಂತದಲ್ಲಿನ ಈ ಅಭಿಯಾನದಲ್ಲಿ ಕಾರ್ಡ್ ತಲುಪಿಸುವುದು, ಮೇಳಗಳನ್ನು ನಡೆಸುವುದು ಮತ್ತು ಮೂರನೇ ಹಂತದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರೊಗ್ಯ ಕಾರ್ಯಕರ್ತರಿಂದ ಆಯುಷ್ಮಾನ್ ಕಾರ್ಡ್ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ರಕ್ತದಾನ ಮತ್ತು ಒಬ್ಬ ವ್ಯಕ್ತಿ ತನ್ನ ಮರಣ ನಂತರವೂ ಜೀವಿಸಬಹುದಾದ ಹಾಗೂ ಇನ್ನೊಂದು ಜೀವಕ್ಕೆ ನೆರವಾಗುವ ಅಂಗಾಂಗ ದಾನದ ಮಹತ್ವವನ್ನು ಈ ಮೇಳದಲ್ಲಿ ತಿಳಿಸಲಾಗುವುದು. ಅಲ್ಲದೆ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೆಂಚೇಗೌಡ ಮಾತನಾಡಿ, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಉಪಯುಕ್ತ ಕಾರ್ಯಕ್ರಮ ನಡೆಸುತ್ತಿದೆ. ಆಯುಷ್ಮಾನ್ ಆರೋಗ್ಯ ಮೇಳದಲ್ಲಿ ವಿವಿಧ ತಜ್ಞ ವೈದ್ಯರು ಆರೋಗ್ಯ ಸೇವೆ ನೀಡುತ್ತಾರೆ ಎಂದು ಹೇಳಿದರು.
ಆಯುಷ್ಮಾನ್ ಕಾರ್ಡ್‌ನಿಂದ ದೊರಕುವ ಸೌಲಭ್ಯಗಳ ಬಗ್ಗೆ ಆರೋಗ್ಯ ಇಲಾಖೆಯ ಬಿ.ಸಿ.ಮಮತಾ ಮಾಹಿತಿ ನೀಡಿದರು. ವೈದ್ಯರಾದ ಅರುಣ್, ಜ್ಯೋತಿ, ಶೈಲಜಾ, ದೀಪಕ್, ಗವಿರಂಗಪ್ಪ, ಮಲ್ಲಿಕಾ ರಾಘವೇಂದ್ರ, ಲೋಕೇಶ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net