25 ಲಕ್ಷ ದೀಪಗಳಿಂದ ಬೆಳಗಿದ ಅಯೋಧ್ಯೆ; ಎರಡು ಗಿನ್ನಿಸ್​ ದಾಖಲೆಗಳಿಗೆ ಭಾಜನ

Ayodhya Deepotsava
Published on

ಅಯೋಧ್ಯೆ: ಒಂದೇ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ತೈಲದ ದೀಪಗಳನ್ನು ಬೆಳಗಿ ಹಾಗೂ ಏಕಕಾಲಕ್ಕೆ ಅತಿ ಹೆಚ್ಚು ಜನರು ಆರತಿ ಮಾಡುವುದರೊಂದಿಗೆ ಅವಳಿ ಗಿನ್ನೆಸ್ ವಿಶ್ವ ದಾಖಲೆಗಳಿಗೆ ಅಯೋಧ್ಯೆ ಬುಧವಾರ ಸಾಕ್ಷಿಯಾಯಿತು. 8ನೇ ವರ್ಷದ ದೀಪೋತ್ಸವದ ವೇಳೆ ಈ ದಾಖಲೆ ಇತಿಹಾಸದ ಪುಟಗಳಲ್ಲಿ ದಾಖಲಾದವು.

ದೀಪಾವಳಿ ಪ್ರಯುಕ್ತ ಶ್ರೀ ರಾಮ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾದ ದೀಪೋತ್ಸವದ ವೇಳೆ 25 ಲಕ್ಷಕ್ಕೂ ಹೆಚ್ಚು ಹಣತೆಗಳನ್ನು ಬೆಳಗಿದ್ದು ಹಾಗೂ 1,121 ವೇದಾಚಾರ್ಯರು ಏಕಕಾಲಕ್ಕೆ ಆರತಿಯನ್ನು ಬೆಳಗಿದ್ದು ವಿಶ್ವ ದಾಖಲೆ ಸೖಷ್ಟಿಗೆ ಕಾರಣವಾದವು.

ಯೋಗಿ ಚಾಲನೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೊದಲು ಕೆಲವು ಹಣತೆ ಗಳನ್ನು ಬೆಳಗಿ ದಾಖಲೆ ದೀಪಮಾಲೆಗೆ ಮುನ್ನುಡಿ ಬರೆದರು. ನ.1ರ ವರೆಗೆ ದೀಪೋತ್ಸವ ಇರಲಿದೆ.

25,12,585: ಬುಧವಾರ ಬೆಳಗಿದ ದಾಖಲೆಯ ಹಣತೆಗಳ ಸಂಖ್ಯೆ.

22,23,676: ಅತ್ಯಧಿಕ ದೀಪ ಬೆಳಗಿದ ಹಿಂದಿನ ದಾಖಲೆ. 2017ರಿಂದ ಭಗವಾನ್ ಶ್ರೀ ರಾಮನ ಜನ್ಮ ಸ್ಥಳವೆಂದು ಗೌರವಿಸಲಾಗುವ ಸರಯೂ ನದಿ ದಡದ ಅಯೋಧ್ಯೆಯಲ್ಲಿ 2017ರಿಂದಲೂ ದೀಪಾವಳಿ ಮುನ್ನಾ ದಿನ ಅತ್ಯಾಕರ್ಷಕ ದೀಪೋತ್ಸವದ ಏರ್ಪಾಡು.

ಹೊಚ್ಚ ಹೊಸ ದಾಖಲೆ: ಅತಿ ಹೆಚ್ಚು ಜನರು ಆರತಿ ಬೆಳಗಿದ್ದು ಹೊಚ್ಚ ಹೊಸ ವಿಶಿಷ್ಟ ದಾಖಲೆಯಾಗಿದೆ.

ಟ್ರೆಂಡಿಂಗ್: ಸಬ್​ಕಾ ಉತ್ಸವ್ ಅಯೋಧ್ಯಾ ದೀಪೋತ್ಸವ್ ಹ್ಯಾಷ್​ಟ್ಯಾಗ್ ಎಕ್ಸ್​ನಲ್ಲಿ ಟ್ರೆಂಡಿಂಗ್. 1,121 ಜನರು, ಯುಪಿ ಪ್ರಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಸರಯೂ ಆರತಿ ಸಮಿತಿ ದಾಖಲೆಯ ಶ್ರೇಯಸ್ಸಿಗೆ ಭಾಜನರು. ರಾಮ ಸ್ಮರಣೆಯ ಹಾಡುಗಳು ನಗರದ ಎಲ್ಲ ಭಾಗ ಗಳಲ್ಲೂ ಮಾರ್ದನಿಸಿ ಭಕ್ತಿಯ ವಾತಾವರಣ ಸೖಷ್ಟಿ.

ಪ್ರಾಣಪ್ರತಿಷ್ಠೆ ಬಳಿಕದ ಪ್ರಪ್ರಥಮ ಉತ್ಸವ

ಅಯೋಧ್ಯೆಗೆ ಭೇಟಿ ನೀಡಿರುವ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ನಿರ್ಣಾಯಕ ಪ್ರವೀಣ್ ಪಟೇಲ್ ಮತ್ತು ಗಿನ್ನೆಸ್ ಕನ್ಸಲ್ಟಂಟ್ ನಿಶ್ಚಲ್ ಭರೋಟ್​ರಿಂದ ಬುಧವಾರ ಸಂಜೆ ಎರಡು ಹೊಸ ದಾಖಲೆಗಳನ್ನು ಘೋಷಣೆ ಮಾಡಿದರು. ಈ ವರ್ಷ ಜನವರಿ 22ರಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ನಂತರದ ಪ್ರಪ್ರಥಮ ದೀಪೋತ್ಸವ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net