

ಅಯೋಧ್ಯೆಯ ವಿವಾದಿತ ಭೂಮಿಯೇ ರಾಮ ಜನ್ಮಸ್ಥಾನ ಎಂದು ಸಾಬೀತುಪಡಿಸುವುದೇ ರಾಮಲಲ್ಲಾ ಮತ್ತು ಹಿಂದು ಸಂಘಟನೆಗಳ ಮುಂದಿದ್ದ ಬಹುದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಹತ್ತಾರು ಧಾರ್ವಿುಕ ಗ್ರಂಥಗಳನ್ನು ಸಂಗ್ರಹಿಸಿ ಕೋರ್ಟಿಗೆ ಸಲ್ಲಿಸುವುದರ ಜತೆಗೆ ‘ಇಲ್ಲಿ ಹಿಂದು ಮಂದಿರವಿತ್ತು’ ಎಂಬ ಕೇಂದ್ರ ಪುರಾತತ್ವ ಇಲಾಖೆ ನೀಡಿದ್ದ ವರದಿ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ದೊಡ್ಡ ಸಾಕ್ಷ್ಯಗಳಾಗಿ ಪರಿಣಮಿಸಿದವು. ಅಲಹಾಬಾದ್ ಹೈಕೋರ್ಟ್ ವಿವಾದಿತ ಭೂಮಿಯನ್ನು ಮೂರೂ ಪಾರ್ಟಿಗಳಿಗೆ ಸಮಾನ ಹಂಚಿಕೆ ಮಾಡುವ ವಿವಾದಾತ್ಮಕ ತೀರ್ಪನ್ನು ನೀಡಿದ್ದರೂ, ಇದು ರಾಮ ಜನ್ಮಸ್ಥಾನ ಎಂಬುದನ್ನು ಸಮ್ಮತಿಸಿದ್ದು ನಮ್ಮ ಪಾಲಿನ ಬಹುದೊಡ್ಡ ಗೆಲುವಾಗಿತ್ತು ಎನ್ನುತ್ತಾರೆ ಹೈಕೋರ್ಟ್ ನಲ್ಲಿ ರಾಮಲಲ್ಲಾ (ಭಗವಾನ್ ಶ್ರೀರಾಮ) ಪರ ವಾದಿಸಿದ್ದ ಸುಪ್ರೀಂಕೋರ್ಟ್ನ ಹಿರಿಯ ವಕೀಲ, ಕನ್ನಡಿಗ ಕೆ.ಎನ್. ಭಟ್. ಅಂದು ಅವರ ಪ್ರಖರ ವಾದ ಮಂಡನೆ ಬಿಜೆಪಿ ಮುಖಂಡ ಎಲ್.ಕೆ. ಆಡ್ವಾಣಿ, ವಿಶ್ವ ಹಿಂದು ಪರಿಷತ್ ಮುಖಂಡ ದಿ.ಅಶೋಕ್ ಸಿಂಘಾಲ್ ಮೆಚ್ಚುಗೆಗೂ ಪಾತ್ರವಾಗಿತ್ತು. ಶ್ರೀರಾಮನ ಪರ ಹೋರಾಡಿದ್ದ ‘ಆ ದಿನಗಳ’ ಬಗ್ಗೆ ಅವರು ವಿಜಯವಾಣಿ ಜತೆ ಮಾತನಾಡಿದ್ದಾರೆ.
ರಾಘವ ಶರ್ಮ ನಿಡ್ಲೆ, ನವದೆಹಲಿ ರಾಮನ ಪರ ವಾದಿಸಿದ್ದು ಜೀವನದ ಸಾರ್ಥಕ ಕ್ಷಣಗಳಲ್ಲೊಂದು ಅನಿಸುತ್ತದೆಯೇ?
ಹೌದು. ಇಂಥದ್ದೊಂದು ಪ್ರಕರಣದಲ್ಲಿ ವಾದ ಮಂಡಿಸುವುದೇ ನನ್ನ ಪಾಲಿನ ಭಾಗ್ಯವಾಗಿತ್ತು. ಸುದೀರ್ಘ ಹೋರಾಟದಲ್ಲಿ ಯಶಸ್ಸು ಸಾಧಿಸಲು ಸಹಪಾಠಿ ವಕೀಲರೊಂದಿಗೆ ನೂರಾರು ಸಂವಾದ-ಸಭೆಗಳನ್ನು ನಡೆಸಿದ್ದುಂಟು. ಸುಪ್ರೀಂಕೋರ್ಟ್ನಲ್ಲಿನ ಕೆಲಸದ ಮೇಲೆ ಹೆಚ್ಚು ಗಮನ ಕೊಡಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಂತ ಅದಕ್ಕೇನೂ ಬೇಸರವಿರಲಿಲ್ಲ. ಏಕೆಂದರೆ ಅದನ್ನೂ ಮೀರಿದ ಪವಿತ್ರ ಕೆಲಸದಲ್ಲಿ ತೊಡಗಿದ್ದೇನೆ ಎಂಬ ಆತ್ಮತೃಪ್ತಿಯಿತ್ತು. ನಿತ್ಯವೂ ಯಾರನ್ನಾದರೂ ಭೇಟಿ ಮಾಡುವುದು, ಚರ್ಚೆ, ಕಾನೂನು ಹೋರಾಟಕ್ಕಾಗಿ ದಾಖಲೆ ಸಂಗ್ರಹ... ಹೀಗೆ ಮುಂದುವರಿದಿತ್ತು. 15-20 ಸಾವಿರಕ್ಕಿಂತಲೂ ಹೆಚ್ಚು ಪುಟಗಳ ದಾಖಲೆಗಳನ್ನು ಅಧ್ಯಯನ ಮಾಡಿದ್ದೇನೆ. ರಾಮನ ಪರ ವಾದ ಮಂಡನೆಗಾಗಿ ಹಣ ಪಡೆಯಲಿಲ್ಲ. ‘ಇಲ್ಲ ನೀವು ವಕೀಲಿಕೆ ಶುಲ್ಕ ತೆಗೆದುಕೊಳ್ಳಲೇಬೇಕು’ ಎಂದು ಒತ್ತಾಯಿಸಲಾಯಿತು. ಆದರೆ, ನನಗಿದು ದೇವರ ಕೆಲಸ ಆಗಿತ್ತು. ಶ್ರೀರಾಮನ ಆಶೀರ್ವಾದದಿಂದಲೇ ಈ ಹಂತಕ್ಕೆ ಬೆಳೆದಿದ್ದೇನೆ. ಅವನ ಕೆಲಸಕ್ಕಾಗಿ ದುಡ್ಡು ಕೇಳುವುದು/ಪಡೆಯುವುದು ಹೇಗೆ ಸರಿಯಾದೀತು? ಅಂದು ನಾನು ವಾದ ಮಂಡನೆಗೆ ಒಪ್ಪಿದಾಗ, ‘ಇನ್ನು ನನ್ನ ವನವಾಸ ಆರಂಭ’ ಎಂದು ಹಿರಿಯ ವಕೀಲರೊಬ್ಬರು ತಮಾಷೆ ಮಾಡಿದ್ದರು. ತೀರ್ಪು ಬಂದ ನಂತರ, ‘ನನ್ನ ವನವಾಸವೇನೋ ಮುಗೀತು. ಆದರೆ, ಪಟ್ಟಾಭಿಷೇಕಕ್ಕೆ ಮಾತ್ರ ಮುಹೂರ್ತ ನಿಗದಿಯಾಗಲೇ ಇಲ್ಲ’ ಎಂದು ನಕ್ಕಿದ್ದೆ. ಅಂತೂ 2020ರಲ್ಲಿ ಆ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಆಗಸ್ಟ್ 5ರ ಮಂದಿರ ಭೂಮಿಪೂಜೆಗೆ ಬರಲೇಬೇಕು ಎಂದು ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಚಂಪತ್ ರಾಯ್ ಫೋನ್ ಮಾಡಿ ಆಹ್ವಾನ ನೀಡಿದ್ದಾರೆ. ಆದರೆ, ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಅಯೋಧ್ಯೆಗೆ ನಾನು ತೆರಳುತ್ತಿಲ್ಲ. ಆ ಬಗ್ಗೆ ಬೇಸರವಿದ್ದರೂ, ಪರ್ಯಾಯ ಮಾರ್ಗವಿಲ್ಲ.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಜತೆಗಿನ ಒಡನಾಟ ಹೇಗಿತ್ತು?
ವಿವಾದಿತ ಸ್ಥಳವೇ ರಾಮ ಜನ್ಮಭೂಮಿ ಎಂಬುದನ್ನು ಕೋರ್ಟ್ ಒಪ್ಪಿಕೊಂಡರೆ ನಮ್ಮ ಹೋರಾಟ ಸಾರ್ಥಕ ಎಂದವರು ನಂಬಿದ್ದರು. ಅದೇ ಕಾರಣಕ್ಕೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಗ್ಗೆ ಅವರಿಗೆ ಖುಷಿ ಇತ್ತು. ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮುಂದುವರಿಯಲಿದೆ ಎಂಬುದು ಗೊತ್ತಿದ್ದರೂ, ನಮ್ಮ ಮೂಲ ಉದ್ದೇಶ ಈಡೇರಿತು ಎಂಬ ಸಮಾಧಾನ ಅವರಲ್ಲಿತ್ತು. ವಿಚಾರಣೆ ನಡೆಯುತ್ತಿದ್ದ ವೇಳೆ ವಾರದಲ್ಲಿ 2 ಬಾರಿ ದೂರವಾಣಿ ಮೂಲಕ ಕರೆ ಮಾಡಿ, ‘ಭಟ್ ಸಾಬ್, ಆಯಿಯೇ ಹಮಾರೇ ಘರ್. ಕುಛ್ ಬಾತ್ ಕರೇಂಗೇ’ ಎಂದು ಆತ್ಮೀಯತೆಯಿಂದ ಕರೆದು ಕೇಸಿನ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಕೇಸಿನಲ್ಲಿ ಶ್ರೀರಾಮನ ಪರ ವಾದಿಸಿ ಎಂದು ನಿಮ್ಮನ್ನು ಕರೆತಂದದ್ದು ಯಾರು?
ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸರು 2003ರಿಂದಲೇ ನನ್ನೊಂದಿಗೆ ಈ ಕೇಸಿನ ಬಗ್ಗೆ ರ್ಚಚಿಸುತ್ತಿದ್ದರು. 2005ರಲ್ಲಿ ‘ನೀನೇ ವಾದಿಸು’ ಎಂದು ಹೊಸ ಜವಾಬ್ದಾರಿ ಹೆಗಲಿಗೇರಿಸಿದ್ದರು. ಅಲ್ಲಿಂದ ಅವರೊಂದಿಗೆ ನಿತ್ಯವೂ ಸಂವಾದ ನಡೆಸುತ್ತಿದ್ದೆ. ಮಂದಿರ ನಿರ್ಮಾಣ ಆಗಲೇಬೇಕು ಎಂಬ ಮಹದಾಶಯ ಅವರದ್ದಾಗಿತು. ಈ ಸುದೀರ್ಘ ಹೋರಾಟದಲ್ಲಿ ಕನ್ನಡಿಗ ರಾಮಾ ಜೋಯಿಸ್ರ ಕೊಡುಗೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇದನ್ನು ಯಾರಾದರೂ ದಾಖಲು ಮಾಡಬೇಕು. ಏಕೆಂದರೆ ರಾಮ ಮಂದಿರಕ್ಕಾಗಿ ಅವರೇನು ಕೊಡುಗೆ ನೀಡಿದರು ಎಂಬ ಬಗ್ಗೆ ಈಗಿನ ಮತ್ತು ಮುಂದಿನ ತಲೆಮಾರಿಗೆ ಮಾಹಿತಿ ಸಿಕ್ಕಂತಾಗುತ್ತದೆ. ಹೈಕೋರ್ಟ್ ತೀರ್ಪಿನಲ್ಲಿ ನಮ್ಮ ಪ್ರತಿಪಾದನೆಗೆ ಕೋರ್ಟ್ ಸಮ್ಮತಿಸಿದಾಗ ಜೋಯಿಸರಲ್ಲಿ ಅಪಾರ ಸಂತೋಷ, ತೃಪ್ತಿ ಕಂಡುಬಂದಿತು. ಕೆಲ ದಿನಗಳ ನಂತರ ಅವರು ನನಗೊಂದು ಪತ್ರ ಬರೆದಿದ್ದರು ಮತ್ತು ಅದನ್ನು ಈಗಲೂ ಇಟ್ಟುಕೊಂಡಿದ್ದೇನೆ. ‘ರಾಮ ಜನ್ಮಸ್ಥಾನ ಎಂಬುದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸುವ ಸಾಹಸವನ್ನು ನೀವು ಜೀವನದ ಗುರಿಯಾಗಿ ತೆಗೆದುಕೊಂಡು ಕೆಲಸ ಮಾಡಿದ್ದೀರಿ. ಇಡೀ ಭಕ್ತವರ್ಗದ ಪರವಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ ಮತ್ತು ಧನ್ಯವಾದ ಅರ್ಪಿಸುತ್ತೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದರು. ಅವರ ಮೆಚ್ಚುಗೆಯ ಮಾತು ಕೇಳಿ ನನ್ನ ಶ್ರಮವೂ ಸಾರ್ಥಕವಾಯ್ತು ಎಂದು ಹಿಗ್ಗಿದ್ದೆ.
ಬಾಬರಿ ಕಟ್ಟಡವಿದ್ದ ಸ್ಥಳದಲ್ಲಿ ಪುರಾತತ್ವ ಇಲಾಖೆ ಉತ್ಖನನ ನಡೆಸುವುದಕ್ಕೆ ಹಿಂದುಗಳು ವಿರೋಧಿಸಿದ್ದರು. ಅವರ ಮನವೊಲಿಸಿದ್ದು ಹೇಗೆ?
ಇದು ರಾಮ ಹುಟ್ಟಿದ ಸ್ಥಳ ಎಂಬ ವಿಷಯವೇ ಹಿಂದುಗಳಲ್ಲಿ ಸಂಚಲನ ಮೂಡಿಸುವಂಥದ್ದು. ತೀರಾ ಭಾವನಾತ್ಮಕ ವಿಷಯವೂ ಹೌದು. ಆದರೆ, ಅಲ್ಲಿ ಉತ್ಖನನ ನಡೆದು, ರಾಮ ಮಂದಿರ ಇತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪುರಾತತ್ವ ಇಲಾಖೆ ವರದಿ ನೀಡಿದರೆ ಏನು ಮಾಡುವುದು? ಹೋರಾಟವೆಲ್ಲವೂ ವ್ಯರ್ಥವಾಗುವುದಿಲ್ಲವೇ? ಭವ್ಯಮಂದಿರ ಕಟ್ಟಬೇಕೆಂಬ ಆಶಯ ಕೈಬಿಡಬೇಕಲ್ಲವೇ ಎಂಬ ಆತಂಕ ವಿಶ್ವ ಹಿಂದು ಪರಿಷತ್ ಸೇರಿ ಎಲ್ಲರಲ್ಲೂ ಇತ್ತು. ಹಾಗಂತ, ಕೋರ್ಟಿನಲ್ಲಿ ಭಾವನೆ ಮುಖ್ಯವಾಗುವುದಿಲ್ಲ. ಅಲ್ಲಿ ಸಾಕ್ಷ್ಯ, ದಾಖಲೆಗಳೇ ಮುಖ್ಯ. ಇದನ್ನು ರಾಮಾ ಜೋಯಿಸರು ಮತ್ತು ನಾನು ಹಲವು ಬಾರಿ ರ್ಚಚಿಸಿದ್ದೆವು ಮತ್ತು ಉತ್ಖನನಕ್ಕೆ ಬೆಂಬಲಿಸಬೇಕು ಎಂಬ ನಿಲುವು ಹೊರಹಾಕಿದೆವು. ಉತ್ಖನನ ವಿರೋಧಿಸಬೇಕು ಎಂದು ನಮ್ಮ ಮೇಲೆ ಒತ್ತಡ ಹಾಕಿದರೂ ನಮ್ಮ ನಿಲುವು ಬದಲಾಗಲಿಲ್ಲ. ಕೆಲವೊಂದಿಷ್ಟು ಹಿಂದುಗಳು ಹೈಕೋರ್ಟ್ ಮೆಟ್ಟಿಲೇರಿ ಉತ್ಖನನಕ್ಕೆ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಈ ವಾದ ಒಪ್ಪಲಿಲ್ಲ ಮತ್ತು ಉತ್ಖನನ ನಡೆಯಲೇಬೇಕು ಎಂದು ಆದೇಶಿಸಿತು. ಹಿಂದುಗಳನ್ನು ನಾವು ಸಮಾಧಾನಪಡಿಸಿದೆವು, ಧೈರ್ಯ ತುಂಬಿದೆವು. ‘ಹಳೆ ಕಾಲದ ಹಿಂದು ಮಂದಿರವೊಂದರ ಮೇಲೆಯೇ ಬಾಬರಿ ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಮಸೀದಿಗೆ ಯಾವುದೇ ಅಡಿಪಾಯ ಹಾಕಿಲ್ಲ’ ಎಂದು ಪುರಾತತ್ವ ಇಲಾಖೆ ವರದಿ ಬಂತು. ಅದು ನಮ್ಮ ಕಾನೂನು ಹೋರಾಟದ ಬಹುದೊಡ್ಡ ಶಕ್ತಿಯಾಗಿ ಹೊರಹೊಮ್ಮಿತು.
ವಿವಾದಿತ ಜಮೀನನ್ನು ಸಮಾನ ಹಂಚಿಕೆ ಮಾಡುವುದು ಪರಿಹಾರವಾಗದು ಎಂದು ಗೊತ್ತಿದ್ದರೂ ಅಲಹಾಬಾದ್ ಹೈಕೋರ್ಟ್ ಆ ರೀತಿ ತೀರ್ಪು ನೀಡಿದ್ದೇಕೆ?
ನ್ಯಾ. ಸುಧೀರ್ ಅಗರ್ವಾಲ್, ನ್ಯಾ.ಎಸ್.ಯು. ಖಾನ್, ನ್ಯಾ.ಡಿ.ವಿ. ಶರ್ಮ ಒಳಗೊಂಡ ತ್ರಿಸದಸ್ಯ ಪೀಠ ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾ, ನಿಮೋಹಿ ಅಖಾಡ ಮತ್ತು ಸುನ್ನಿ ವಕ್ಛ್ ಮಂಡಳಿಗೆ ಸಮಾನವಾಗಿ ಹಂಚಿಕೆ ಮಾಡಿತ್ತು. ಈ ಪ್ರಕರಣದಲ್ಲಿ ನಿಮೋಹಿ ಅಖಾಡ ಮತ್ತು ಸುನ್ನಿ ವಕ್ಛ್ ಬೋರ್ಡ್ಗೆ ಯಾವುದೇ ವ್ಯಾಪ್ತಿಯಿಲ್ಲ ಹೈಕೋರ್ಟ್ ತೀರ್ಪು ನೀಡಿದರೂ, ಅವರಿಗೂ ಭೂಮಿ ಹಂಚಿಕೆ ಮಾಡಿದ್ದೇಕೆ ಎಂಬುದು ಪ್ರಶ್ನಾರ್ಹ. ನನಗನಿಸುವಂತೆ, ನ್ಯಾಯಮೂರ್ತಿಗಳಿಗೆ ತೀರ್ಪಿನ ಪರಿಣಾಮ ದೇಶಾದ್ಯಂತ ಕೋಮುಗಲಭೆ ನಡೆಯಬಹುದು ಎಂಬ ಆತಂಕವಿತ್ತು. ಹೀಗಾಗಿಯೇ, ಸಮಾನ ಹಂಚಿಕೆಯ ಸೂತ್ರ ಅನುಸರಿಸಲು ಮುಂದಾಗಿದ್ದರು. ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುತ್ತಾರೆ ಎಂಬುದು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಗೊತ್ತಿರದ ವಿಷಯವೇನಾಗಿರಲಿಲ್ಲ.