ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ; ಕಾರಣ ಕೇಳಿದ ಸಭಾಪತಿಗೆ ಅವರು ಹೇಳಿದ್ದಿಷ್ಟು..

Ayanur Manjunath
Published on

ಹುಬ್ಬಳ್ಳಿ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜೆಡಿಎಸ್​ ಟಿಕೆಟ್ ಖಚಿತವಾಗುತ್ತಿದ್ದಂತೆ ಆಯನೂರು ಮಂಜುನಾಥ್ ಇಂದು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಇಂದು ಪ್ರಕಟಿಸಿದ್ದ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಹೆಸರು ಘೋಷಣೆಯಾಗಿತ್ತು.

ಹುಬ್ಬಳ್ಳಿಯಲ್ಲಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಆಯನೂರು ಮಂಜುನಾಥ್ ತಮ್ಮ ಆಪ್ತರೊಂದಿಗೆ ಆಗಮಿಸಿದ್ದು, ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸ್ವೀಕರಿಸುವ ಮುನ್ನ ಅವರಿಂದ ಸಭಾಪತಿ ಕಾರಣವನ್ನೂ ಕೇಳಿದರು.

ಯಾರ ಒತ್ತಡಕ್ಕಾಗಿ ಮಣಿದು ರಾಜೀನಾಮೆ ನೀಡುತ್ತಿದ್ದೀರಾ ಎಂದು ಎಂದು ಮಂಜುನಾಥ್​ಗೆ ಸಭಾಪತಿ ಪ್ರಶ್ನೆ ಮಾಡಿದ್ದಾರೆ. ನಾನು ಯಾರ ಒತ್ತಡಕ್ಕೂ ಮಣಿದು ರಾಜಿನಾಮೆ ನೀಡುತ್ತಿಲ್ಲ. ನನ್ನ ಸ್ವ-ಇಚ್ಛೆಯಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ಮಂಜುನಾಥ್ ತಿಳಿಸಿದ್ದಾರೆ. ಆಯನೂರು ಮಂಜುನಾಥ್ ನೈಋತ್ಯ ಪದವೀದರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು.

ಈ ಚುನಾವಣಾ ಘೋಷಣೆಯಾದ ಮೇಲೆ 6 ಜನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು ಪಕ್ಷಾಂತರ ಪರ್ವ ನೋಡಿದ್ದೆ, ಆದರೆ ರಾಜೀನಾಮೆ ಪರ್ವ ನೋಡಿರಲಿಲ್ಲ. ಕಳೆದ 42 ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ರಾಜೀನಾಮೆ ನೀಡಿದ್ದು ಇದೇ ಮೊದಲು. ಯಾರೇ ರಾಜಿನಾಮೆ ನೀಡಲು ಬಂದರೆ ಮತ್ತೊಂದು ಸಲ ಯೋಚನೆ ಮಾಡಿ ಎಂದು ನಾನು ತಿಳಿ ಹೇಳುತ್ತೇನೆ. ಅದಾಗ್ಯೂ ಅವರ ನಿರ್ಧಾರ ದೃಢವಾಗಿದ್ದಾಗ ನಾನು ಅನಿವಾರ್ಯವಾಗಿ ರಾಜೀನಾಮೆ ಸ್ವೀಕರಿಸಬೇಕಾಗುತ್ತದೆ ಎಂದು ಆಯನೂರು ಮಂಜುನಾಥ್ ರಾಜೀನಾಮೆ ಸ್ವೀಕರಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಭಾಪತಿ ಹೊರಟ್ಟಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net