

ಬಣಕಲ್ (ಮೂಡಿಗೆರೆ): ವಿಜ್ಞಾನವನ್ನು ವೈಚಾರಿಕವಾಗಿ ನಮ್ಮ ನಿತ್ಯದ ಬದುಕಿಗೆ ಬಳಸಿಕೊಳ್ಳಲು ವಿಲರಾದರೆ ಅದು ವ್ಯಕ್ತಿಗತವಾದ ಸಮಗ್ರ ಬದುಕಿಗೆ ಮತ್ತು ಇಡೀ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದು ಮೂಡಿಗೆರೆ ತಾಲೂಕು ಬಿಇಒ ಹೇಮಂತರಾಜ್ ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್)ಯಿಂದ ಮೂಡಿಗೆರೆ ಸಮೀಪದ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೆಜೆವಿಎಸ್ ದಶಮಾನೋತ್ಸವ ಮತ್ತು ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು, ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮೂಹ ಜಾಗೃತಿ ಮೂಡಿಸಬೇಕು. ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಕೆಜೆವಿಎಸ್ ಮಾಡುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಸಮಿತಿ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಕೆಜೆವಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಮಾತನಾಡಿ, ಕೆಜೆವಿಎಸ್ ಕೇವಲ ವಿಜ್ಞಾನದ ಸಂಗತಿಗಳಿಗೆ ಸೀಮಿತವಾಗದೆ, ಈ ನೆಲ, ಜಲ, ಜೀವವೈವಿಧ್ಯ ಹಾಗೂ ಮಾನವೀಯ ಮೌಲ್ಯದಂತಹ ಹತ್ತು ಹಲವು ಸಂಗತಿಗಳಿಗೆ ಸ್ಪಂದಿಸುತ್ತಿದೆ. ಹತ್ತು ವರ್ಷಗಳಿಂದ ರಾಜ್ಯಾದ್ಯಂತ ನೆಲದ ಜನರ ಧ್ವನಿಯಾಗುತ್ತಲೇ ಬರುತ್ತಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಬಿತ್ತಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ವೈಜ್ಞಾನಿಕ ಯುಗದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಮನೋವಿಕಾಸ ಕುರಿತು ಶರಣ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಗಂಗಾಧರ ಶಿವಪುರ ಮಾತನಾಡಿ, ವಿಜ್ಞಾನದ ಸಂಶೋಧನೆಗಳ ಲಗಳು ಮನುಷ್ಯ ಮತ್ತು ಜೀವ ವೈವಿಧ್ಯದ ಸಾವಿಗೆ ಕಾರಣವಾಗದೆ, ಪರಿಸರದ ಬೆಳವಣಿಗೆಗೆ ಮತ್ತು ಮಕ್ಕಳ ಮನೋವಿಕಾಸದ ಅಭಿವೃದ್ಧಿಗೆ ನೆರವಾಗಬೇಕು. ವಿಜ್ಞಾನ ನಮ್ಮನ್ನು ಬಳಸಿಕೊಳ್ಳದೆ ನಾವು ವಿಜ್ಞಾನವನ್ನು ನಮ್ಮ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗೆ ಹೆಚ್ಚು ದುಡಿಸಿಕೊಳ್ಳಬೇಕು ಎಂದರು.
ನೀರು ಮತ್ತು ನೈರ್ಮಲ್ಯ ಕುರಿತು ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳು, ಕೆಜೆವಿಎಸ್‌ನಿಂದ ನೀಡುವ ಅನಿತಾ ಕೌಲ್ ಹಾಗೂ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕೆಜೆವಿಎಸ್ ಜಿಲ್ಲಾಧ್ಯಕ್ಷ ಮುಗಳಿಕಟ್ಟೆ ಲೋಕೇಶ್, ಮೂಡಿಗೆರೆ ತಾಲೂಕು ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಶಾಂತಕುಮಾರ್, ಅಂಗಡಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಇ.ರಾಮೇಶ್ವರಪ್ಪ, ಜಾನಪದ ಗಾಯಕ ಬಕ್ಕಿ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಶರಣೆ ಸಿದ್ದಮ್ಮ, ನಿವೃತ್ತ ಶಿಕ್ಷಕಿ ನಾಗರತ್ನ, ಸೀತಮ್ಮ ಹಾಲೇಗೌಡ, ಶಿಕ್ಷಕಿ ಲತಾ, ಮಂಜಪ್ಪ ದೊಡ್ಮನಿ, ಆರ್.ಪ್ರಕಾಶ್ ಇದ್ದರು.