

ಚಿಕ್ಕಮಗಳೂರು: ಸ್ವಚ್ಛತೆ, ಗ್ರಾಪಂ ಕಾರ್ಯವೈಖರಿ, ನರೇಗಾ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿರುವ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ, ಕಳಸದ ಇಡಕಣಿ, ಅಜ್ಜಂಪುರದ ಬುಕ್ಕಾಂಬುದಿ, ಕಡೂರಿನ ಜೋಡಿತಿಮ್ಮಾಪುರ, ಕೊಪ್ಪದ ಜಯಪುರ, ಮೂಡಿಗೆರೆಯ ಜಾವಳಿ, ಎನ್.ಆರ್.ಪುರದ ನಾಗಲಾಪುರ, ಶೃಂಗೇರಿಯ ಕುತೂಗೋಡು, ತರೀಕೆರೆಯ ಹಾದಿಕೆರೆ ಗ್ರಾಪಮಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಜಿಲ್ಲೆಯ ಎಂಟು ತಾಲೂಕುಗಳ ಪ್ರತಿ ಗ್ರಾಪಂನ ಕಾರ್ಯವೈಖರಿ ರೇಟಿಂಗ್ ಆಧರಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರತಿ ತಾಲೂಕಿನಿಂದ ಒಂದೊಂದು ಗ್ರಾಪಂ ಆಯ್ಕೆ ಮಾಡಲಾಗಿದೆ. ಅ.2ರಂದು ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಯಾ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಭಾಗವಹಿಸಿ ಪುರಸ್ಕಾರ ಸ್ವೀಕರಿಸಲಿದ್ದಾರೆ.
ಗ್ರಾಪಂನ ಒಂದೊಂದು ವಿಭಾಗದಲ್ಲಿ ಮಾಡುವ ಕೆಲಸಕ್ಕೂ ರೇಟಿಂಗ್ ನಿಗದಿಪಡಿಸಲಾಗಿರುತ್ತದೆ. ಈ ರೇಟಿಂಗ್ ಅನ್ನು ಆಯಾ ಗ್ರಾಪಂ ಪಿಡಿಒಗಳೇ ನೀಡುತ್ತಾರೆ. ಇದನ್ನು ತಾಲೂಕು ಪಂಚಾಯಿತಿ ಇಒ ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ಪಕ್ಕದ ತಾಲೂಕಿನ ಇಒಗಳು ಇನ್ನೊಂದು ತಾಲೂಕಿನ ಗ್ರಾಪಂಗಳಿಗೆ ಭೇಟಿ ನೀಡಿ ರೇಟಿಂಗ್ ಪರಾಮರ್ಶೆ ನಡೆಸುತ್ತಾರೆ. ಆ ತಾಲೂಕಿನ ಅತ್ಯುತ್ತಮ ಕೆಲಸ ಮಾಡಿದ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸು ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸುತ್ತಾರೆ. ಜಿಲ್ಲಾ ಪಂಚಾಯಿತಿ ಸಿಇಒ ಸಹ ಮತ್ತೊಮ್ಮೆ ರೇಟಿಂಗ್ ಪರಿಶೀಲಿಸಿ ಸರ್ಕಾರಕ್ಕೆ ಅಂತಿಮ ಪಟ್ಟಿ ಸಲ್ಲಿಸುತ್ತಾರೆ.
ಜಿಲ್ಲೆಯ ಎಂಟು ತಾಲೂಕುಗಳಲ್ಲಿಯೂ ಒಂದೊಂದು ಅತ್ಯುತ್ತಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಗಾಂಧಿಗ್ರಾಮ ಪುರಸ್ಕಾರಕ್ಕೆ ಕಳುಹಿಸಲಾಗಿದೆ. ಈಗಾಗಲೇ ಅಂತಿಮಗೊಳಿಸಿರುವ 8 ಗ್ರಾಮ ಪಂಚಾಯಿತಿಗಳಿಗೆ ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುತ್ತದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾಹಿತಿ ನೀಡಿದರು.
ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಪಂಗಳನ್ನು ಕಟ್ಟುನಿಟ್ಟಾಗಿ ಆಯ್ಕೆ ಮಾಡಲಾಗಿದೆ. ಅಧಿಕಾರಿಗಳು ಯಾವ ಒತ್ತಡಕ್ಕೂ ಮಣಿಯದೆ ಯಾವ ಗ್ರಾಪಂಗಳು ಅತ್ಯುತ್ತಮ ಸಾಧನೆ ಮಾಡಿವೆಯೋ ಅವುಗಳಿಗೆ ಪುರಸ್ಕಾರ ನೀಡಲಾಗಿದೆ. ಈ ಮೂಲಕ ಇತರ ಗ್ರಾಪಂಗಳು ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಮಾಡಿ ಪುರಸ್ಕಾರ ಪಡೆಯಲು ಪ್ರೇರಣೆ ಸಿಕ್ಕಂತಾಗಿದೆ.
ಸಾಧನೆ ಖುಷಿ ತಂದಿದೆ: ಮುಗುಳವಳ್ಳಿ ಗ್ರಾಪಂಗೆ ಇದುವರೆಗೆ ಯಾವ ಪ್ರಶಸ್ತಿಗಳೂ ಬಂದಿರಲಿಲ್ಲ. ಇದೀಗ ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮ ಗ್ರಾಪಂ ಆಯ್ಕೆ ಆಗಿರುವುದು ಎಲ್ಲರಿಗೂ ಖುಷಿ ತಂದಿದೆ. ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿರುವುದರಿಂದಲೇ ನಮ್ಮ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಉಪಾಧ್ಯಕ್ಷ ಎಂ.ಡಿ.ಉಮೇಶ್ ವಿಜಯವಾಣಿಯೊಂದಿಗೆ ಸಂತಸ ಹಂಚಿಕೊಂಡರು. ಗ್ರಾಪಂನ ಎಲ್ಲ ಸದಸ್ಯರು ಪಕ್ಷಭೇದ ಮರೆತು ಕೆಲಸ ಮಾಡುತ್ತಿದ್ದೇವೆ. ಯಾವ ವಾರ್ಡ್‌ನಲ್ಲಿ ಯಾವ ಕೆಲಸವಾಗುವ ತುರ್ತು ಇರುತ್ತದೆಯೋ ಅದನ್ನು ಎಲ್ಲರೂ ಸೇರಿ ಮಾಡುತ್ತಿದ್ದೇವೆ. ಹೀಗಾಗಿಯೇ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಜಿಪಂ, ತಾಪಂ ಅಧಿಕಾರಿಗಳು ಕಾಲಕಾಲಕ್ಕೆ ಸೂಕ್ತ ನಿರ್ದೇಶನ ನೀಡುತ್ತಿದ್ದರು. ಜತೆಗೆ ಪಿಡಿಒ ಸುಮಾ ಅವರು ಸಹಕಾರ ನೀಡಿದ್ದರಿಂದ ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಇದೆಲ್ಲವನ್ನೂ ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮ ಗ್ರಾಪಂ ಆಯ್ಕೆಯಾಗಿದೆ ಎಂದರು.