

ಬೆಂಗಳೂರು: ಮಹಿಳೆಯರ ಒಂಬತ್ತು ತಿಂಗಳ ಗರ್ಭಾವಸ್ಥೆ ಪ್ರಕ್ರಿಯೆಯಲ್ಲಿ ವೈದ್ಯರು, ಪೌಷ್ಠಿಕತಜ್ಞರು, ಶುಚಿಯಾದ ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡುವಂತೆ ಸೂಚನೆ ನೀಡುತ್ತಾರೆ. ಆರೋಗ್ಯಕರ ಮಗು ಮತ್ತು ಸುರಕ್ಷಿತ ಹೆರಿಗೆಯನ್ನು ಪಡೆಯಲು ಸಲಹೆ ನೀಡುತ್ತಾರೆ. ಆದರೆ ಚೀನಿ ಸಂಪ್ರದಾಯದಲ್ಲಿನ ಕೆಲವು ನಂಬಿಕೆಗಳು ಕೇಳಿದರೆ ಮಾತ್ರ ನಿಮಗೆ ನಿಜಕ್ಕೂ ವಿಚಿತ್ರ ಎನ್ನಿಸಬಹುದು.
ಮಗು ಸುಂದರವಾಗಿ ಹುಟ್ಟಲು ಗರ್ಭಿಣಿಯರು ಬಾದಮಿ, ಕೇಸರಿ ಹಾಲು ಕುಡಿಯಲು ಸಲಹೆ ನೀಡಿದ್ರೆ, ಚೀನಾದಲ್ಲಿ ಮಗು ಸುಂದರವಾಗಿ ಹುಟ್ಟಲು ನಾಯಿಯ ತಲೆ ಬುರುಡೆಯನ್ನು ತಿನ್ನಲು ಸಲಹೆ ನೀಡುತ್ತಾರೆ ಎನ್ನಲಾಗಿದೆ.
ಚೀನಾದಲ್ಲಿರುವ ನಂಬಿಕೆಯ ಪ್ರಕಾರ, ಗರ್ಭಿಣಿ ಮಹಿಳೆಯರು ನಾಯಿಯ ತಲೆ ಬುರುಡೆಯನ್ನು ಬೇಯಿಸಿ ತಿನ್ನುವುದರಿಂದ ಉತ್ತಮ ಬೆಳವಣಿಗೆಯ ಜೊತೆಗೆ ಮಗು ಬೆಳ್ಳಗೆ, ಸುಂದರವಾಗಿ ಜನಿಸುತ್ತದೆ. ಜೊತೆಗೆ ಇದು ಮಗುವಿನ ಮೇಲೆ ಧನಾತ್ಮಕ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆಯಂತೆ.
ಸಂಶೋಧಕರಾದ ಕ್ಸಾಂಡರ್ ಲೀ ಅವರ ಪ್ರಕಾರ, ಗರ್ಭಿಣಿ ಮಹಿಳೆಯರು ಬಿಳಿ ಬಣ್ಣದ ನಾಯಿಯ ತಲೆ ಬುರುಡೆಯನ್ನು ಬೇಯಿಸಿ ತಿಂದರೆ ಮಗು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಜನಿಸುತ್ತದೆ. ಈ ಬಗ್ಗೆ ಚೀನಾದ ಪುರಾತನ ಸಾಹಿತ್ಯಗಳಲ್ಲಿ ಒಂದಾದ ತೈಚಾಂಶುದಲ್ಲಿಯೂ ಉಲ್ಲೇಖಿಸಲಾಗಿದೆ. ಚೀನಾದಲ್ಲಿ ಗರ್ಭಿಣಿಯರು ಸಂಜೆ ನಂತರ ಊಟ ಮಾಡುವಾಗ ಅವರು ಚಿಕ್ಕ ಬಟ್ಟಲಿನಲ್ಲಿಯೇ ಅನ್ನವನ್ನು ತಿನ್ನಬೇಕು, ಇದರಿಂದ ಮಗುವಿನ ತಲೆಯು ಚಿಕ್ಕದಾಗಿ ಮತ್ತು ಸುಂದರವಾಗಿರುತ್ತದೆ ಎಂಬ ನಂಬಿಕೆಯೂ ಇದೆ ಎನ್ನಲಾಗಿದೆ.