ಪೊಲೀಸರ ಅನುಪಸ್ಥಿತಿಯಲ್ಲಿ ಒಂದೂವರೆ ಗಂಟೆಗಳ ಕಾಲ ಟ್ರಾಫಿಕ್ ಪೊಲೀಸ್‌ ಆಗಿ ಕರ್ತವ್ಯ ನಿರ್ವಹಿಸಿದ Auto Driver

Auto Driver
Published on

Auto Driver: ಒಬ್ಬ ಸಾಮಾನ್ಯ ಆಟೋ ಚಾಲಕ ತನ್ನ ಜವಾಬ್ದಾರಿಯನ್ನು ಮೀರಿ ಶಾಲಾ ಮಕ್ಕಳ ಬಸ್, ಆಂಬ್ಯುಲೆನ್ಸ್ ಸೇರಿದಂತೆ ಭಾರೀ ಟ್ರಾಫಿಕ್ಅನ್ನು ನಿರ್ವಹಿಸಿದ ಘಟನೆ ಚಂಡೀಗಢದ ಮಣಿಮಾಜ್ರಾದಲ್ಲಿ ನಡೆದಿದೆ.

ರಸ್ತೆಯಲ್ಲಿ ಟ್ರಾಫಿಕ್ ಲೈಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಜೊತೆಗೆ ಟ್ರಾಫಿಕ್‌ ಪೊಲೀಸರ ಅನುಪಸ್ಥಿತಿಯಿಂದಾಗಿ ಆಟೋ ಚಾಲಕ ಈ ಕೆಲಸವನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಮಣಿಮಾಜ್ರಾ ಹೌಸಿಂಗ್ ಬೋರ್ಡ್‌ನ ಮುಂದೆ ಹಿಮಾಚಲ ಮತ್ತು ಶಿಮ್ಲಾ ಕಡೆಗೆ ಹೋಗುವ ಮುಖ್ಯ ಚೌಕ್‌ನಲ್ಲಿ ಟ್ರಾಫಿಕ್ ಲೈಟ್ ಇದ್ದಕ್ಕಿದ್ದಂತೆ ಕೆಟ್ಟು ನಿಂತಿತ್ತು. ಹೀಗಾಗಿ ರಸ್ತೆಯಲ್ಲಿ ದೊಡ್ಡ ಜಾಮ್ ಉಂಟಾಯಿತು.

ಸ್ಥಳದಲ್ಲಿ ಯಾವುದೇ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿಲ್ಲ. ಈ ಪರಿಸ್ಥಿತಿಯಲ್ಲಿ ಅನಿಲ್ ಕುಮಾರ್ ಎಂದು ಗುರುತಿಸಲಾದ ಆಟೋ ಚಾಲಕನು ತನ್ನ ಆಟೋವನ್ನು ಒಂದು ಬದಿಯಲ್ಲಿ ನಿಲ್ಲಿಸಿ, ಯಾವುದೇ ಆದೇಶಗಳಿಲ್ಲದೆ ಸಂಚಾರವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡನು. ಅವನು ರಸ್ತೆಯ ಮಧ್ಯದಲ್ಲಿ ನಿಂತು, ಎಲ್ಲಾ ದಿಕ್ಕುಗಳಿಂದ ಬರುವ ವಾಹನಗಳನ್ನು ಒಂದೊಂದಾಗಿ ಸಂಯಮದಿಂದ ಹೊರಗೆ ಬಿಡಲು ಪ್ರಾರಂಭಿಸಿದನು ಎಂದು ಸ್ಥಳೀಯರು ಹೇಳಿದ್ದಾರೆ.

ಸಂಚಾರವನ್ನು ನಿಯಂತ್ರಿಸುವುದನ್ನು ನೋಡಿದ ಅನೇಕ ಸ್ಥಳೀಯರು ಮತ್ತು ಚಾಲಕರು ಅವರಿಗೆ ನಮಸ್ಕರಿಸಿದರು ಮತ್ತು ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅನಿಲ್ ಕುಮಾರ್ ಕೇವಲ ಆಟೋ ಚಾಲಕರಲ್ಲ, ಅವರು ಆಗಾಗ್ಗೆ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಅವರು ಅಗತ್ಯವಿರುವ ಜನರಿಗೆ ಸಹಾಯ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಅನಿಲ್ ಕುಮಾರ್ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರವನ್ನು ನಿಯಂತ್ರಿಸಿದರು. ಈ ಮಧ್ಯೆ, ಯಾವುದೇ ಸಂಚಾರ ಪೊಲೀಸರು ಸ್ಥಳಕ್ಕೆ ಬರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net