

Student: ಉತ್ತರಪ್ರದೇಶದ ಮಣಿಪುರಿಯ ಭೋಗಾನ್ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಕುಸಿದ ಪರಿಣಾಮ ಅಲ್ಲಿನ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಬಹಳ ಕಷ್ಟಪಟ್ಟು ಹೋಗುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇನ್ನು ಐದರಿಂದ ಆರು ವರ್ಷದ ವಿದ್ಯಾರ್ಥಿನಿ ಶಾಲೆಗೆ ತೆರಳುವ ಸಮಯದಲ್ಲಿ 9 ಇಂಚಿನ ಒಳಚರಂಡಿ ಮೇಲೆ ಹಾದು ಹೋಗುವಾಗ ಆಯತಪ್ಪಿ ಬಿದ್ದಿರುವ ವಿಡಿಯೋವನ್ನು ಸ್ಥಳೀಯರಾದ ಪ್ರೇಮ ಚಿರಾಯಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ಆಯತಪ್ಪಿ ಮಣ್ಣಿನ ಮೇಲೆ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ. ಬಾಲಕಿ ಚರಂಡಿ ಒಳಗೆ ಬಿದ್ದಿದ್ದರೆ, ಗಂಭೀರ ಗಾಯವಾಗುತ್ತಿತ್ತು. ಅದೃಷ್ಟವಶಾತ್ ಬಾಲಕಿಗೆ ಗಂಭೀರ ಗಾಯವಾಗಿಲ್ಲ ಎಂಬುದು ಧೃಡಪಟ್ಟಿದೆ. ಇನ್ನು ವಿದ್ಯಾರ್ಥಿನಿ ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇನ್ನು ಈ ವಿಡಿಯೋದಲ್ಲಿ ಬೇರೆ ವಿದ್ಯಾರ್ಥಿಗಳು ಕೆಸರಿನಲ್ಲಿ ಹೆಜ್ಜೆ ಹಾಕಿ, ಮುಂದೆ ಸಾಗುತ್ತಿರುವುದನ್ನು ಕಾಣಬಹುದು. ನಗರ ಪಂಚಾಯಿತಿ ಬೇಜವಬ್ದಾರಿತನದಿಂದ ಕೆಸರಿನಿಂದ ತುಂಬಿದ ರಸ್ತೆಯಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ಸ್ಥಳೀಯರು ನಗರ ಪಂಚಾಯತ್ ಅಧಿಕಾರಿಗಳಿಗೆ ಕೆಸರು ತುಂಬಿದ ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿದ್ದಾರೆ.
ಇನ್ನು ಈ ಸಮಸ್ಯೆ ಬಗ್ಗೆ ಭೋಗಾನ್ ಉಪ ಜಿಲ್ಲಾಧಿಕಾರಿ ಸಂಧ್ಯಾ ಶರ್ಮರನ್ನು ಪ್ರಶ್ನಿಸಿದಾಗ, ನನಗೆ ಈ ವಿಷಯ ತಿಳಿದಿಲ್ಲ. ಹಾಗೆಯೇ ಆ ರಸ್ತೆಯ ಬಗ್ಗೆ ಮಾಹಿತಿ ತಿಳಿದು ಸರಿಪಡಿಸಲು ಸೂಚಿಸುತ್ತೇನೆ ಎಂದರು. (ಏಜೆನ್ಸೀಸ್)