

ಕೊಪ್ಪ: ಸಂಪ್ರದಾಯಸ್ಥ ಕುಟುಂಬದಲ್ಲಿದ್ದರೂ ಸಂಪ್ರದಾಯಗಳ ವಿರುದ್ಧವೇ ಬರೆದು ಕಾಲಪ್ರವಾಹದ ವಿರುದ್ಧ ಈಜಿದವರು ಸಾಹಿತಿ ಎಂ.ಕೆ.ಇಂದಿರಾ ಎಂದು ಲೇಖಕಿ ದೀಪಾ ಹಿರೇಗುತ್ತಿ ಹೇಳಿದರು.
ಹರಿಹರಪುರ ಮಲ್ಲೇಶಯ್ಯನವರ ಛತ್ರದಲ್ಲಿ ತಾಲೂಕು ಸಿರಿಗನ್ನಡ ವೇದಿಕೆ ಹರಿಹರಪುರ ಹೋಬಳಿ ಕಸಾಪ, ರೋಟರಿ ಸಮುದಾಯದಳ ಹರಿಹರಪುರ, ಹೋಬಳಿ ಕರ್ನಾಟಕ ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಶ್ರಾವಣ ನುಡಿಸಿರಿ ಕಾರ್ಯಕ್ರಮದಲ್ಲಿ ಎಂ.ಕೆ.ಇಂದಿರಾ ಅವರ ಬದುಕು, ಬರಹ ವಿಷಯವಾಗಿ ಉಪನ್ಯಾಸ ನೀಡಿದರು.
ವಿಧವೆಯ ಗೋಳು, ಬಾಲ್ಯವಿವಾಹ, ಜಾತಿ ಪದ್ಧತಿ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಬರೆದರು. ಚಳವಳಿಯ ಮನಸ್ಥಿತಿ ಹೊಂದಿರುವ ಲೇಖಕಿ ಎಂ.ಕೆ.ಇಂದಿರಾ ಅವರು 49 ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಯಶಸ್ವಿಯಾಗಿವೆ ಎಂದರು.
ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್ ಮಾತನಾಡಿ, ಕನ್ನಡದ ಕೆಲಸ ಮಾಡುವುದರಿಂದ ನಮಗೆ ಸಂಸ್ಕಾರ ಬರುತ್ತದೆ. ಹಿಂದೆ ಶಿಕ್ಷಣದ ಕೊರತೆ ಇದ್ದರೂ ಜನರಲ್ಲಿ ಮೌಲ್ಯಗಳಿದ್ದವು. ಇಂದು ಶಿಕ್ಷಣ ಇದೆ, ಆದರೆ ಮೌಲ್ಯ ಇಲ್ಲ ಎಂದು ಹೇಳಿದರು.
ಹಾಲ್ಮುತ್ತೂರು ಭವಾನಿಶಂಕರ ಭಜನಾ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಿವೃತ್ತ ಯೋಧ ಶುಕುರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಹೋಬಳಿ ಕಸಾಪ ಅಧ್ಯಕ್ಷ ವೈದ್ಯ ಬಿ.ಆರ್.ಅಂಬರೀಶ್, ರೋಟರಿ ಸಮುದಾಯದಳ ಅಧ್ಯಕ್ಷ ಶ್ರೀನಿವಾಸಮೂರ್ತಿ, ತಮನ್ನಾ, ಚಾವಲ್ಮನೆ ಸುರೇಶ್ ನಾಯ್ಕ, ಅಣ್ಣಯ್ಯ, ನಾಗರಾಜ್, ನಿಲುಗುಳಿ ಪದ್ಮನಾಭ್, ಎ.ಒ.ವೆಂಟೇಶ್, ಸುಮಾ, ಸುಮಿತ್ರಾ, ನಾರಾಯಣ್ ಸೇರೇಗಾರ್, ಮಂಜುನಾಥ್ ಇತರರಿದ್ದರು.